ಸುದ್ದಿ ಕನ್ನಡ ವಾರ್ತೆ
ಶಿರಸಿ: ನಗರ ಪ್ರದೇಶದಲ್ಲಿ ವಾಸಿಸುವವರು ತಮಗೆ ಧರ್ಮಾಚರಣೆಗೆ ಹೆಚ್ಚಿನ ಅವಕಾಶವಿಲ್ಲ ಎಂಬ ಭಾವನೆಯಿಂದ ಹೊರಬರಬೇಕು. ನಿತ್ಯ ಜೀವನದಲ್ಲಿ ಆಸನ, ಪ್ರಾಣಾಯಾಮ, ಜಪ ಹಾಗೂ ಆಹಾರ ನಿಯಮಗಳನ್ನು ಅಳವಡಿಸಿಕೊಂಡರೆ ನಗರದಲ್ಲಿದ್ದರೂ ಧರ್ಮಾಚರಣೆ ಮಾಡುವುದರ ಜೊತೆಗೆ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಚಾತುರ್ಮಾಸ್ಯದ ಅಂಗವಾಗಿ ಶಿರಸಿ ನಗರ ಸೀಮೆ ಹಾಗೂ ಕಾರವಾರ ಸೀಮೆಯ ಶಿಷ್ಯ ಮಹಾಜನರು ಸಲ್ಲಿಸಿದ ಸೇವೆಯನ್ನು ಸ್ವೀಕರಿಸಿ ಅನುಗ್ರಹ ಭಾಷಣ ಮಾಡಿದ ಅವರು, ನಗರೀಕರಣದ ಇಂದಿನ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸರಳವಾಗಿ ಅನುಸರಿಸಬಹುದಾದ ಧಾರ್ಮಿಕ ಸಾಧನೆಗಳ ಕುರಿತು ಮಾರ್ಗದರ್ಶನ ನೀಡಿದರು.
ಭಗವಂತನ ಚಿಂತನೆ ಹಾಗೂ ಮನಸ್ಸಿನ ಏಕಾಗ್ರತೆಗೆ ಶರೀರದ ಸ್ಥಿರತೆ ಅತ್ಯಗತ್ಯ. ‘ಸ್ಥಿರ ಸುಖಂ ಆಸನಂ’ ಎಂಬಂತೆ ಶರೀರ, ಶಿರ ಮತ್ತು ಕುತ್ತಿಗೆಯನ್ನು ನೇರವಾಗಿರಿಸಿ ಕನಿಷ್ಠ ಒಂದೂವರೆ ಗಂಟೆಯಾದರೂ ಸ್ಥಿರವಾಗಿ ಕುಳಿತುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಶರೀರ ಸ್ಥಿರವಾದಾಗ ಮನಸ್ಸನ್ನೂ ಏಕಾಗ್ರಗೊಳಿಸಲು ಸಾಧ್ಯವಾಗುತ್ತದೆ. ಪ್ರಾಣಾಯಾಮವು ದೇಹ ಹಾಗೂ ಮನಸ್ಸನ್ನು ದೈವಿಕ ಚಿಂತನೆಗೆ ಸಿದ್ಧಗೊಳಿಸುವ ಸಾಧನವಾಗಿದೆ. ಉಸಿರನ್ನು ದೀರ್ಘವಾಗಿ ಹೊರಬಿಡುವುದು ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಕುಂಭಕ ಅಭ್ಯಾಸ ಮಾಡಬೇಕು. ಉಸಿರಾಟದ ಸಾಮರ್ಥ್ಯದ ಮಿತಿಯನ್ನು ಮೀರಿ ಒತ್ತಡ ಹೇರಬಾರದು. ಪ್ರಾಣಾಯಾಮದಿಂದ ಸತ್ತ್ವಗುಣ ವೃದ್ಧಿಯಾಗಿ ಆಲಸ್ಯ ಹಾಗೂ ತಾಮಸಗುಣಗಳು ದೂರವಾಗುತ್ತವೆ ಎಂದರು.
ಜಪ ಮತ್ತು ಉಪಾಸನೆಯ ಮಹತ್ತ್ವವನ್ನು ವಿವರಿಸಿದ ಶ್ರೀಗಳು, ಜಪವು ಮನೋಮಯ ಹಾಗೂ ವಿಜ್ಞಾನಮಯ ಕೋಶಗಳನ್ನು ಶುದ್ಧೀಕರಿಸುತ್ತದೆ. ಧ್ವನಿಯೆತ್ತಿ ಮಾಡುವ ಜಪ, ಉಪಾಂಶು ಜಪ ಹಾಗೂ ಮನಸ್ಸಿನಲ್ಲಿಯೇ ಮಾಡುವ ಜಪ ಎಂಬ ಮೂರು ವಿಧಗಳಿದ್ದು, ಇವುಗಳಲ್ಲಿ ಮಾನಸಿಕ ಜಪ ಅತ್ಯಂತ ಶ್ರೇಷ್ಠವಾಗಿದೆ. ಆಸನ, ಪ್ರಾಣಾಯಾಮ ಮತ್ತು ಜಪದ ಸಾಧನೆಗೆ ಪೂರಕವಾಗಿ ಸಾತ್ತ್ವಿಕ ಆಹಾರ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಧರ್ಮಾಚರಣೆ ಎಂಬುದು ನಿರ್ದಿಷ್ಟ ಸ್ಥಳ ಅಥವಾ ಪರಿಸರಕ್ಕೆ ಮಾತ್ರ ಸೀಮಿತವಲ್ಲ. ನಿತ್ಯ ಜೀವನದಲ್ಲಿಯೇ ಸರಳ ನಿಯಮಗಳನ್ನು ಪಾಲಿಸುವ ಮೂಲಕ ಧಾರ್ಮಿಕ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಶ್ರೀಗಳು ಅಭಯ ನೀಡಿದರು.
ಸಭೆಯಲ್ಲಿ ಶ್ರೀ ಆನಂದಾಶ್ರಮೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರವಾರ ಹಾಗೂ ಶಿರಸಿ ನಗರ ಸೀಮೆಯ ಸಾವಿರಾರು ಶಿಷ್ಯ ಮಹಾಜನರು ಮತ್ತು ಭಕ್ತರು ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ನಗರದ ದಾಮೋದರ ಭಟ್, ಎಸ್ ಎಂ ಉಪಾಧ್ಯ, ಚಂದ್ರಶೇಖರ ಹೆಗಡೆ, ಶ್ರೀಕಾಂತ ಹೆಗಡೆ ಇತರರು ಇದ್ದರು.
