Banner Ad

ಸುದ್ದಿ ಕನ್ನಡ ವಾರ್ತೆ
​ಗೋಕರ್ಣ: ಭಾರತೀಯ ಪರಂಪರೆಯಲ್ಲಿ ಯೋಗದೃಷ್ಟಿಯಿಂದ ಕಂಡುಕೊಂಡಿರುವ ಹಲವು ಅಂಶಗಳು ಇಂದಿನ ವೈದ್ಯಕೀಯ ಉಪಕರಣಗಳಿಗೆ ಇನ್ನೂ ಕಾಣ ಸಿಗುತ್ತಿಲ್ಲ. ಶಾಸ್ತ್ರಗಳಲ್ಲಿ ಉಲ್ಲೇಖಿತ ವಿಚಾರಗಳು ಎಲ್ಲ ಜೀವಿಗಳಲ್ಲಿಯೂ ಇದ್ದು, ಅವುಗಳನ್ನು ಆಧುನಿಕ ವಿಜ್ಞಾನ ಇನ್ನೂ ಕಂಡುಕೊಳ್ಳಬೇಕಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

​ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಪ್ರವಚನ ನೀಡಿದ ಶ್ರೀಗಳು, ಜಠರಾಗ್ನಿಯ ಪ್ರಮುಖ ಅಭಿವ್ಯಕ್ತಿಯೇ ಹಸಿವು. ದೇಹದ ಉಷ್ಣತೆ, ಹಸಿವು ಹಾಗೂ ಆಹಾರ ಜೀರ್ಣವಾಗುವ ಪ್ರಕ್ರಿಯೆಯ ಹಿಂದೆ ಕಾರ್ಯನಿರ್ವಹಿಸುವ ಶಕ್ತಿಯನ್ನು ಭಾರತೀಯ ಪರಂಪರೆ ‘ಅಗ್ನಿ’ ಎಂದು ಗುರುತಿಸಿದೆ ಎಂದರು.

Banner Ad

 

​ಅಗ್ನಿರೂಪದ ರುದ್ರ ಜೀರ್ಣಿಸಲು ಕಷ್ಟವಾಗುವ ಅನೇಕ ವಿಷಯಗಳನ್ನು ಜೀರ್ಣವಾಗಿಸಿ, ದೇಹಕ್ಕೆ ಅಗತ್ಯವಾದ ಅಂಶಗಳನ್ನು ಒದಗಿಸುತ್ತಾನೆ. ಅಗ್ನಿಯು ತನ್ನ ಕಾರ್ಯವನ್ನು ನಿಲ್ಲಿಸಿದರೆ ಅದು ಜೀವಿಯ ಮರಣಕ್ಕೂ ಕಾರಣವಾಗಬಹುದು. ಶಂಕರಾಚಾರ್ಯರು ಸೌಂದರ್ಯಲಹರಿಯಲ್ಲಿ ನಾಭಿಯ ಪರಿಸರದಲ್ಲಿರುವ ಮಣಿಪೂರಕ ಚಕ್ರದಲ್ಲಿ ಅಗ್ನಿಯಿದೆ ಎಂದು ಉಲ್ಲೇಖಿಸಿದ್ದಾರೆ. ಅಷ್ಟಾಂಗ ಹೃದಯ, ಭಾವಪ್ರಕಾಶ ಹಾಗೂ ಸುಶ್ರುತ ಸಂಹಿತೆಯಲ್ಲಿಯೂ ಜಠರಾಗ್ನಿಯ ಸ್ಥಾನವನ್ನು ವಿವರಿಸಲಾಗಿದೆ ಎಂದು ತಿಳಿಸಿದರು.

Banner Ad