ಸುದ್ದಿ ಕನ್ನಡ ವಾರ್ತೆ
​ಜೋಯಿಡಾ: 13 ಅಗಸ್ಟ್
​ವಿಶ್ವ ಆನೆ ದಿನಾಚರಣೆಯ ನಿಮಿತ್ತ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಫಣಸೋಲಿ ವನ್ಯಜೀವಿ ವಲಯದ ಫಣಸೋಲಿ ಆನೆ ಶಿಬಿರದಲ್ಲಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಹಣ್ಣು-ಹಂಪಲುಗಳನ್ನು ತಿನ್ನಿಸುವ ಮೂಲಕ ಸಂಭ್ರಮದಿಂದ ದಿನಾಚರಣೆಯನ್ನು ಆಚರಿಸಲಾಯಿತು.

​ಕಾರ್ಯಕ್ರಮದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ನಿರ್ದೇಶಕರಾದ ನೀಲೇಶ ಶಿಂದೆ ಮತ್ತು ದಾಂಡೇಲಿ ವನ್ಯಜೀವಿ ಉಪ ವಿಭಾಗದ ಮಾನ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಗಿರೀಶ್ ಸಂಕ್ರಿ ಹಾಗೂ ಫಣಸೋಲಿ ವಲಯ ಅರಣ್ಯಾಧಿಕಾರಿ ಬಸವರಾಜ್ ಅವರು ಉಪಸ್ಥಿತರಿದ್ದು, ಆನೆಗಳಿಗೆ ಪೂಜೆ ನೆರವೇರಿಸಿದರು. ಶಿಬಿರದ ಆನೆಗಳನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆನೆಗಳಿಗೆ ಕಬ್ಬು, ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳನ್ನು ಪ್ರೀತಿಯಿಂದ ತಿನ್ನಿಸಿ ಸಂಭ್ರಮಿಸಿದರು.

​ಈ ಸಂದರ್ಭದಲ್ಲಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿಗಳು, ಪಶು ವೈದ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು ಇದ್ದರು. ಇದಲ್ಲದೆ ಧಾರವಾಡದ ಕರ್ನಾಟಕ ಅರಣ್ಯ ಅಕಾಡೆಮಿಯ ವಲಯ ಅರಣ್ಯಾಧಿಕಾರಿ ತರಬೇತಾರ್ಥಿಗಳು,ಬಾಪೇಲಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಫಣಸೋಲಿ ಪರಿಸರ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಅರಣ್ಯ ಸಿಬ್ಬಂದಿಗಳು ಹಾಗೂ ಸ್ಥಳೀಯ ಊರಿನ ನಾಗರಿಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.