ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಸಿಂಗಾರಗಾಂವ್ ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಆಮಶೇತ ಶಾಲೆಯ ಮುಖ್ಯೋಪಾಧ್ಯಾಯರಾದ ರಮೇಶ ಕದಂರವರು ದಿನಾಂಕ:31-07-2026 ರಂದು ಸೇವಾನಿವೃತ್ತಗೊಂಡಿದ್ದು,ಇವರ ಸೇವಾ ನಿವೃತ್ತಿ ಹಾಗೂ ಬೀಳ್ಕೊಡುಗೆ ಸಮಾರಂಭ ದಿನಾಂಕ:07-08-2026 ( ಶುಕ್ರವಾರ)ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಆಮಶೇತದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಗೆ ಗಣ್ಯರನ್ನು ಆಹ್ವಾನಿಸಲಾಯಿತು. ಶಾಲೆಯ ವಿದ್ಯಾರ್ಥಿಗಳಿಂದ ಸ್ವಾಗತ ಗೀತೆ,ಪ್ರಾರ್ಥನೆಯನ್ನು ಹಾಡಲಾಯಿತು. ಕಾರ್ಯಕ್ರಮದ ವೇದಿಕೆಯ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಪಸ್ಥಿತರಿದ್ದ ಗಣ್ಯರು ನೆರವೇರಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಗಮಿಸಿದ್ದ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ ಮಾತನಾಡಿ ಮುಖ್ಯೋಪಾಧ್ಯಾಯರಾದ ರಮೇಶ ಕದಂ ಸರ್ ರವರು ತಾಲೂಕಿನಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ ಶಿಕ್ಷಕರಲ್ಲಿ ಒಬ್ಬರು,ಇಂದು ಅವರು ಇಲಾಖೆಯ ನಿಯಮಾವಳಿ ಪ್ರಕಾರ ವಯೋ ನಿವೃತ್ತಿ ಹೊಂದುವುದು ಅನಿವಾರ್ಯ, ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಕಾರ್ಯವೈಖರಿಯಿಂದ ಇತರ ಶಿಕ್ಷಕರಿಗೆ ಮಾದರಿಯಾಗಿದ್ದರು.ಅವರ ಮುಂದಿನ ನಿವೃತ್ತಿಯ ಜೀವನ ಸುಖಕರವಾಗಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ತಾಲೂಕಾ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳ,ಶಿಕ್ಷಕರ ಪರವಾಗಿ ಶುಭ ಹಾರೈಸಿದರು.ಜಗಲಬೇಟ ಕ್ಲಸ್ಟರಿನ ಸಿ.ಆರ್.ಪಿ ಗಳಾದ ನಾರಾಯಣ ದೇಸಾಯಿ ಸರ್ ಮಾತನಾಡಿ ವಯೋ ನಿವೃತ್ತಿಯಾಗುತ್ತಿರುವ ರಮೇಶ ಕದಂ ಸರ್ ಅವರು ಇಲಾಖೆಯ ನಿಯಮಾವಳಿಯಂತೆ ನಿವೃತ್ತಿ ಅನಿವಾರ್ಯ,ಈ ಭಾಗದಲ್ಲಿ ಯಾವುದೇ ಶೈಕ್ಷಣಿಕ ಕಾರ್ಯಕ್ರಮವಿರಲಿ ಇಲಾಖೆ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ಸಂಘಟಿಸುತ್ತಿದ್ದರು.ಅವರ ವೃತ್ತಿಪರ ಕಾರ್ಯದಕ್ಷತೆ ನಮಗೆಲ್ಲಾ ಸದಾ ಪ್ರೇರಣಾದಾಯ,ಅವರ ಅನುಭವ,ಮಾರ್ಗದರ್ಶನ ನಿವೃತ್ತಿಯ ನಂತರವೂ ನಮಗೆಲ್ಲಾ ನಿರಂತರ ಇರಲಿ,ನಿವೃತ್ತಿಯ ನಂತರದ ಜೀವನವು ಸುಖಕರವಾಗಲಿ ಭಗವಂತನಲ್ಲಿ ಬೇಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ಹೆಚ್ ಸಿ ಜಾಧವ್ ಇವರು ಮಾತನಾಡುತ್ತಾ ರಮೇಶ ಕದಂ ಅವರ ಜೊತೆ ಕಳೆದ ದಿನಗಳನ್ನು ಮೆಲುಕು ಹಾಕುತ್ತಾ ಅವರ ನಯ ವಿನಯತೆಯನ್ನು ಸ್ಮರಿಸಿದರು.ಶಿಂದೋಳಿ ಶಾಲೆಯ ಮುಖ್ಯ ಶಿಕ್ಷಕರಾದ ಅನೀಲ ರಾಠೋಡ ಮಾತನಾಡುತ್ತಾ ರಮೇಶ ಕದಂ ಗುರುಗಳೊಂದಿಗೆ ಕಳೆದ ದಿನಗಳನ್ನು ನೆನೆಯುತ್ತಾ ಹಿರಿಯರು ಕಿರಿಯರು ಎನ್ನದೇ ಎಲ್ಲರನ್ನೂ ಅತ್ಯಂತ ಆತ್ಮೀಯತೆಯಿಂದ ಕಾಣುವ ಕದಂ ಸರ್ ಅವರ ಸರಳ ಜೀವನ ಶೈಲಿ ಎಲ್ಲರೊಟ್ಟಿಗೆ ಬೆರೆಯುವ ರೀತಿ,ಸದಾ ಶಾಲಾ ಮಕ್ಕಳ ಶ್ರೇಯೋಭಿವೃದ್ಧಿಗೆ ಹಂಬಲಿಸುವ ಅವರ ಗುಣಗಳು ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದೂ ಹೇಳಿದರು.ಕಾರ್ಯಕ್ರಮದ ವೇದಿಕೆಯ ಮೇಲೆ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರು,ಸದಸ್ಯರು,ಊರ ಪ್ರಮುಖರು,ತಾಲೂಕಿನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು ಉಪಸ್ಥಿತರಿದ್ದು ಕಾರ್ಯಕ್ರಮದ ಕುರಿತು ಸಂದರ್ಭೋಚಿತವಾಗಿ ಮಾತನಾಡಿ ರಮೇಶ ಕದಂ ಶಿಕ್ಷಕರ ನಿವೃತ್ತಿಯ ನಂತರದ ಜೀವನವು ಸುಖಕರವಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಇಲಾಖೆ,ಶಾಲೆಯ,ಊರಿನ ಗ್ರಾಮಸ್ಥರ,ಶಿಕ್ಷಕರ ವತಿಯಿಂದ ನಿವೃತ್ತಿಯನ್ನು ಹೊಂದುತ್ತಿರುವ ಆಮಶೇತ ಶಾಲೆಯ ಮುಖ್ಯೋಪಾಧ್ಯಾಯರಾದ ರಮೇಶ ಕದಂ ಸರ್ ದಂಪತಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯರಾದ ರಮೇಶ ಕದಂ ಮಾತನಾಡಿ ಹಳಿಯಾಳ ತಾಲೂಕಿನ ಕರಿಯಂಪಾಲಿ ಶಾಲೆಯಲ್ಲಿ ತನ್ನ ಶಿಕ್ಷಕ ವೃತ್ತಿಯ ಸೇವೆ ಆರಂಭಿಸಿದಾಗನಿಂದ ಜೋಯಿಡಾ ತಾಲೂಕಿನ ವೈಜಗಾಂವ ಹಾಗೂ ಆಮಶೇತ ಶಾಲೆ ಇಲ್ಲಿಯವರೆಗೆ ಇಲಾಖೆಯ ಅಧಿಕಾರಿಗಳ,ಶಿಕ್ಷಕ ವೃಂದದವರ, ಸಮುದಾಯದವರ, ಪಾಲಕರ,ಪೋಷಕರ,ಗಣ್ಯರ,ಮಕ್ಕಳ ಸಹಕಾರವನ್ನು ಮರೆಯುವಂತಿಲ್ಲ ಎಂದು ಭಾವುಕರಾದರು.ವಿಶೇಷವಾಗಿ ಈ ಊರಿನ ಗ್ರಾಮಸ್ಥರ ಪ್ರೀತಿ, ವಿಶ್ವಾಸ,ಸಹಕಾರ ಸದಾ ಕಾಲ ನೆನಪಿನಲ್ಲಿ ಉಳಿಯುವಂತದ್ದು ಎಂದು ಹೇಳಿದರು.ಈ ಸಂದರ್ಭದಲ್ಲಿ ಸುಮಧುರವಾದ ಹಾಡನ್ನು ಹಾಡುವ ಮೂಲಕ ಎಲ್ಲರ ಮನ ಸೆಳೆದರು. ಇದೇ ಸಂದರ್ಭದಲ್ಲಿ ಬೇರೆ ಶಾಲೆಗೆ ವರ್ಗಾವಣೆಗೊಂಡ ಆಮಶೇತ ಶಾಲೆಯ ಸಹ ಶಿಕ್ಷಕಿಯಾದ ಅನಿತಾ ಎಂ ಎಂ ದಂಪತಿಯನ್ನು ಸನ್ಮಾನಿಸಿ ಅವರ ಮುಂದಿನ ಶೈಕ್ಷಣಿಕ ವೃತ್ತಿಯ ಜೀವನವು ಶುಭಕರವಾಗಲಿ ಎಂದು ಉಪಸ್ಥಿತರಿದ್ದ ಎಲ್ಲರೂ ಹಾರೈಸಿದರು. ತಾಲ್ಲೂಕಿನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ನಿವೃತ್ತ ಶಿಕ್ಷಕರು, ಗ್ರಾಮಸ್ಥರು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಪಾಲಕರು, ಪೋಷಕರು,ಮಕ್ಕಳು ಭಾಗವಹಿಸಿದ್ದರು.
ಶಾಲಾ ಎಸ್ ಡಿ ಎಮ್ ಸಿ ಯವರು,ಊರ ಗ್ರಾಮಸ್ಥರು,ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು. ಶಾಲೆಯ ಸಹ ಶಿಕ್ಷಕರಾದ ಸಂತೋಷ ಕೆ ಟಿ ಇವರು ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದರು . ಶಿಕ್ಷಕಿ ಕಾವ್ಯ ಇವರು ವಂದನಾರ್ಪಣೆ ನಡೆಸಿಕೊಟ್ಟರು.
