ಸುದ್ದಿ ಕನ್ನಡ ವಾರ್ತೆ
ಭಟ್ಕಳ: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ದ್ವಿಚಕ್ರ ವಾಹನ ಚಾಲನೆಗೆ ಅವಕಾಶ ಕಲ್ಪಿಸಿದ್ದ ಪ್ರಕರಣದಲ್ಲಿ ವಾಹನದ ಮಾಲೀಕರಿಗೆ ₹25,000 ದಂಡ ವಿಧಿಸಲಾಗಿದೆ.
ಮುರುಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ನೀರಗದ್ದೆ ಬೈಲೂರು ನಿವಾಸಿ ಸುಬ್ರಾಯ ಬಡಕಯ್ಯ ನಾಯ್ಕ್ ಎಂಬುವವರು ತಮ್ಮ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕನಿಗೆ ಚಾಲನೆ ಮಾಡಲು ನೀಡಿದ್ದರು.
ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯ ಪಿಎಸ್ಐ ಹನುಮಂತ ಬಿರಾದಾರ ಅವರು ಮೋಟಾರು ವಾಹನ ಕಾಯ್ದೆಯ ಕಲಂ 5 ಹಾಗೂ 199(ಎ) ಅಡಿಯಲ್ಲಿ ವಾಹನ ಮಾಲೀಕರ ವಿರುದ್ಧ ದೋಷಾರೋಪಣಾ ಪತ್ರವನ್ನು ಭಟ್ಕಳದ ಮಾನ್ಯ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ವಾಹನದ ಮಾಲೀಕ ಸುಬ್ರಾಯ ಬಡಕಯ್ಯ ನಾಯ್ಕ್ ಅವರಿಗೆ ₹25,000 ದಂಡ ವಿಧಿಸಿ ಆದೇಶಿಸಿದೆ.
ಮುರುಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡಿದ ಪ್ರಕರಣದಲ್ಲಿ ದಂಡ ವಿಧಿಸಲಾದ 5ನೇ ಪ್ರಕರಣ ಇದಾಗಿದೆ.
