ಸುದ್ದಿ ಕನ್ನಡ ವಾರ್ತೆ
​ಜೋಯಿಡಾ:ತಾಲೂಕಿನ ಕರಂಜೋಯಿಡಾ ಗ್ರಾಮ ವ್ಯಾಪ್ತಿಯ ವಾಗೇಲಿ-ಜೋಯಿಡಾ ಮಾರ್ಗದಲ್ಲಿ ಶನಿವಾರ ಬೆಳಿಗ್ಗೆ ವಾಗೇಲಿಯಿಂದ ಜೋಯಿಡಾಕ್ಕೆ ತೆರಳುತ್ತಿದ್ದ ಬಸ್ ಖಾನಗಾಂವ ಗ್ರಾಮದ ಸಮೀಪಕ್ಕೆ ಬಂದಾಗ, ಬೃಹತ್ ಮರದ ಕೊಂಬೆಯೊಂದು ರಸ್ತೆಯ ಮಧ್ಯಭಾಗಕ್ಕೆ ಹಾಗೂ ವಿದ್ಯುತ್ ತಂತಿಗಳ ಮೇಲೆ ಏಕಾಏಕಿ ಬಿದ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು ಮುರಿದು ಬಿದ್ದವು.

​ಘಟನೆಯಿಂದ ಕೆಲಕಾಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಬಸ್‌ನಲ್ಲಿದ್ದ ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಆತಂಕಕ್ಕೊಳಗಾದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
​ಘಟನೆಯ ಮಾಹಿತಿ ತಿಳಿದ ತಕ್ಷಣ ಖಾನಗಾಂವ ಗ್ರಾಮದ ರಾಜೇಶ ಗಾವಡಾ ಹಾಗೂ ಇತರ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಮರದ ಕೊಂಬೆಯನ್ನು ಕತ್ತರಿಸಿ ತೆರವುಗೊಳಿಸಿದರು. ಬಳಿಕ ವಿದ್ಯುತ್ ತಂತಿಗಳನ್ನು ಎಚ್ಚರಿಕೆಯಿಂದ ಬೇರ್ಪಡಿಸಿ, ಮುರಿದು ಬಿದ್ದ ವಿದ್ಯುತ್ ಕಂಬಗಳನ್ನು ರಸ್ತೆಯ ಬದಿಗೆ ಎಳೆದು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

​ಈ ಕಾರ್ಯಾಚರಣೆಗೆ ಸಾಕಷ್ಟು ಸಮಯ ಹಿಡಿದಿದ್ದು, ಖಾನಗಾಂವ ಗ್ರಾಮದ ವೈಣೋ ಗಾವಡಾ ಸೇರಿದಂತೆ ಹಲವರು ಶ್ರಮವಹಿಸಿ ಸಹಕರಿಸಿದರು. ಗ್ರಾಮಸ್ಥರ ಸಮಯೋಚಿತ ಕಾರ್ಯದಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

​ಸ್ಥಳೀಯರು ಸಂಬಂಧಪಟ್ಟ ಇಲಾಖೆಗಳು ರಸ್ತೆ ಬದಿಯ ಅಪಾಯಕಾರಿ ಮರಗಳ ಕೊಂಬೆಗಳನ್ನು ಪರಿಶೀಲಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.