ಸುದ್ದಿ ಕನ್ನಡ ವಾರ್ತೆ
ಜೋಯಿಡಾ :ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ತಾಲೂಕು ಪಂಚಾಯತ್ ಜೋಯಿಡಾ ಘಟಕದ ವತಿಯಿಂದ ಮಾನ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಭಾರತಿ ಎನ್. ರವರ ನೇತೃತ್ವದಲ್ಲಿ ದಿನಾಂಕ 18 ಸಪ್ಟೆಂಬರ್ 2026 ರಂದು ಸರ್ಕಾರಿ ಶ್ರೀರಾಮ ಪ್ರೌಢಶಾಲೆ, ಜೋಯಿಡಾ ದಲ್ಲಿ “ಸ್ವಚ್ಛತೆಯೇ ಸೇವೆ 2026” “ಸ್ವಚ್ಛತಾ ಹೀ ಸೇವಾ” ಅಭಿಯಾನದ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು .ಗ್ರಾಮ ಪಂಚಾಯತ್ ಜೋಯಿಡಾದ ಪಿ.ಡಿ.ಓ.ಗಳಾದ ಶ್ರೀ ಮೋಹನ ರವರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

ಕಾರ್ಯನಿರ್ವಣಾಧಿಕಾರಿಗಳು, ಸ್ವಚ್ಛತೆಯಲ್ಲಿ ವಿದ್ಯಾರ್ಥಿಗಳ ಸಹಭಾಗಿತ್ವ, ಸ್ವಚ್ಛ ಮತ್ತು ವಿಕಸಿತ ಭಾರತದ ದೃಷ್ಟಿಕೋನ ಹಾಗೂ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ತಿಳಿಸಿಕೊಟ್ಟರು.
ವಿದ್ಯಾರ್ಥಿಗಳಿಗೆ ಕಸದ ವಿಂಗಡಣೆ ಮತ್ತು ವಿಲೇವಾರಿಗಳ ಬಗ್ಗೆ, ವೈಯಕ್ತಿಕ ಸ್ವಚ್ಛತೆ ಹಾಗೂ ಪರಿಸರ ನೈರ್ಮಲ್ಯದ ಬಗ್ಗೆ ತಿಳಿಸಿದರು. ವಿದ್ಯಾರ್ಥಿ ಗಳಿಗೆ ತಮ್ಮ ತಮ್ಮ ಮನೆಗಳಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಒಣಕಸವನ್ನು ಸಂಗ್ರಹಿಸಿ ತರಲು ಸೂಚನೆ ನೀಡಿದರು.
ದಿನಾಂಕ 19 ಸೆಪ್ಟೆಂಬರ್ 2026ರಂದು “ಸ್ವಚ್ಛತಾ ಹೀ ಸೇವಾ” ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳನ್ನು SHS ಮಾನವ ಸರಪಳಿ ರಚನೆಯಲ್ಲಿ ಕೂರಿಸಿಕೊಂಡು “ಸ್ವಚ್ಛತೆಯಲ್ಲಿ ನಮ್ಮ ಸಹಭಾಗಿತ್ವ” ಮತ್ತು “ಸ್ವಚ್ಛ ಭಾರತ ವಿಕಸಿತ ಭಾರತ”- ಧ್ಯೇಯ ವಾಕ್ಯಗಳನ್ನು ಘೋಷಿಸಲಾಯಿತು. ಸ್ವಚ್ಛತಾ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ಸಂಗ್ರಹಿಸಿ ತಂದ ತ್ಯಾಜ್ಯ ಒಣಕಸವನ್ನು ಮಾನ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ತಾವೇ ಖುದ್ದಾಗಿ ನಿಂತು ಸ್ವಚ್ಛ ವಾಹಿನಿಗೆ ತುಂಬುವುದರ ಮೂಲಕ ಚಾಲನೆ ನೀಡಿರುವುದು ವಿಶೇಷವಾಗಿತ್ತು. ಶಾಲೆಯ 150ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ಸಂಗ್ರಹಿಸಿ ತಂದ ಕಸದ ಚೀಲವನ್ನು ಹಸ್ತಾಂತರಿಸಿದರು. ಈ ಅಭಿಯಾನವು ನಿರಂತರವಾಗಿ ಮತ್ತು ವ್ಯಾಪಕವಾಗಿ ಮುಂದುವರಿಯಬೇಕೆಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಆರ್. ಆರ್. ನಾಯಕ, ಶಿಕ್ಷಕ ವೃಂದ, ಬೋಧಕೇತರ ತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
