ಸುದ್ದಿ ಕನ್ನಡ ವಾರ್ತೆ
​ಯಲ್ಲಾಪುರ: ಅಪ್ರಾಪ್ತ ವಯಸ್ಕರ ಕೈಗೆ ವಾಹನ ನೀಡುವುದು ಕಾನೂನಿನ ಪ್ರಕಾರ ಗಂಭೀರ ಅಪರಾಧ ಎಂಬುದನ್ನು ಯಲ್ಲಾಪುರ ನ್ಯಾಯಾಲಯದ ತೀರ್ಪು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಅಪ್ರಾಪ್ತ ಬಾಲಕನಿಗೆ ಬೈಕ್ ಚಾಲನೆಗೆ ಅವಕಾಶ ನೀಡಿದ ಪ್ರಕರಣದಲ್ಲಿ ವಾಹನ ಮಾಲೀಕರಿಗೆ ₹25,000 ದಂಡ ವಿಧಿಸಲಾಗಿದೆ.

​ಸುಮಾರು ವಾರ ದ ಹಿಂದೆ ಹುಬ್ಬಳ್ಳಿಯ ನಿವಾಸಿ ಅರವಿಂದ ದತ್ತಾತ್ರೇಯ ಪವಾರ್ ಅವರ ಕೆಎ-03-ಇಎಂ-2834 ನೋಂದಣಿ ಸಂಖ್ಯೆಯ ಬೈಕ್‌ನಲ್ಲಿ ಅಪ್ರಾಪ್ತ ಬಾಲಕ ಯಲ್ಲಾಪುರದಲ್ಲಿ ಚಾಲನೆ ಮಾಡುತ್ತಿರುವಾಗ ಕೋಳಿಕೇರೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಬಾಲಕನನ್ನು ತಡೆದು ಪರಿಶೀಲನೆ ನಡೆಸಿದ್ದಾರೆ.
​ಈ ವೇಳೆ ಪಿಎಸ್ಐ ಸಿದ್ದಪ್ಪ ಗುಡಿ ಅವರು ಬೈಕಿನ ದಾಖಲೆಗಳು, ಚಾಲನಾ ಪರವಾನಗಿ ಪರಿಶೀಲಿಸಿದ್ದಾರೆ. ಪರಿಶೀಲನೆಯಲ್ಲಿ ಬಾಲಕನಿಗೆ ಇನ್ನೂ 18 ವರ್ಷ ಪೂರ್ಣವಾಗಿಲ್ಲ ಹಾಗೂ ಚಾಲನಾ ಪರವಾನಗಿ ಇಲ್ಲದೇ ಬೈಕ್ ಚಲಾಯಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಇದರಿಂದ ಪೊಲೀಸರು ಬೈಕ್ ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು.

​ನಂತರ ನಿಯಮಾನುಸಾರ ವಾಹನ ವಶಪಡಿಸಿಕೊಂಡ ಕುರಿತು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಯಲ್ಲಾಪುರದ ಸಿವಿಲ್ ನ್ಯಾಯಾಧೀಶೆ ಅನಿತಾಕುಮಾರಿ ಎಸ್. ಅವರು ಬಾಲಕನ ಪಾಲಕರನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದರು.ವಿಚಾರಣೆ ವೇಳೆ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದ ನ್ಯಾಯಾಧೀಶರು, ವಾಹನ ಮಾಲೀಕರಾದ ಅರವಿಂದ ದತ್ತಾತ್ರೇಯ ಪವಾರ್ ಅವರಿಗೆ ₹25,000 ದಂಡ ವಿಧಿಸಿ ಆದೇಶಿಸಿದರು. ದಂಡ ಪಾವತಿಸಿದ ಬಳಿಕ ಬೈಕ್ ಅನ್ನು ಮಾಲೀಕರಿಗೆ ಹಸ್ತಾಂತರಿಸಲಾಯಿತು.
​ಅಪ್ರಾಪ್ತ ವಯಸ್ಕರಿಗೆ ವಾಹನ ನೀಡುವುದು ಕಾನೂನುಬಾಹಿರವಾಗಿದ್ದು, ಇಂತಹ ಪ್ರಕರಣಗಳಲ್ಲಿ ವಾಹನ ಮಾಲೀಕರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.