ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿನ ಗಟಾರ ಅವ್ಯವಸ್ಥೆಯಿಂದ ಸಾರ್ವಜನಿಕರು, ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳು ಸಂಚರಿಸಲು ಸಮಸ್ಯೆಯಾಗುತ್ತಿದೆ. ಇದು ರಾಜ್ಯ ಹೆದ್ದಾರಿಯಾಗಿದ್ದು, ಮಳೆಗಾಲ ಬಂತೆಂದರೆ ಸಾಕು, ರಸ್ತೆಯು ಹಳ್ಳದಂತಾಗುತ್ತದೆ.
ವಜ್ರಳ್ಳಿಯ ಪ್ರೌಢಶಾಲೆಯ ಗೇಟ್ ಎದುರಿನಿಂದ ಹಿಡಿದು ಪ್ರಾಥಮಿಕ ಶಾಲೆಯವರೆಗಿನ ರಸ್ತೆಯು ಈಗ ಮಳೆಗಾಲದಲ್ಲಿ ಕೆಸರುಮಯವಾಗಿದೆ. ರಸ್ತೆಯ ಪಕ್ಕದಲ್ಲಿ ಸರಿಯಾದ ಗಟಾರ ವ್ಯವಸ್ಥೆ ಇಲ್ಲದಿರುವುದು, ಗಟಾರಗಳಲ್ಲಿ ಹೂಳು ತುಂಬಿ ನೀರು ಹರಿಯಲು ದಾರಿ ಇಲ್ಲದಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಪರಿಣಾಮವಾಗಿ, ಮಳೆ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ.
ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರುವ ನೂರಾರು ವಿದ್ಯಾರ್ಥಿಗಳು ಈ ಕೆಸರಿನಲ್ಲೇ ನಡೆದುಕೊಂಡು ಹೋಗುವ ಅನಿವಾರ್ಯತೆ ಇದೆ. ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿನ ಹೊಂಡಗಳು ಕಾಣದೆ ಪ್ರಯಾಣಿಸುವಂತಾಗಿದೆ.
ರಾಜ್ಯ ಹೆದ್ದಾರಿ ಪ್ರಾಧಿಕಾರವು ಇನ್ನು ಮುಂದಾದರೂ ಎಚ್ಚೆತ್ತುಕೊಂಡು, ವಜ್ರಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ವೈಜ್ಞಾನಿಕ ಮಾದರಿಯ ಗಟಾರ ನಿರ್ಮಿಸಬೇಕು. ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚಿ, ನೀರು ಸುಲಭವಾಗಿ ಹರಿದು ಹೋಗಲು ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
