ಸುದ್ದಿ ಕನ್ನಡ ವಾರ್ತೆ
​ದಾಂಡೇಲಿ: ನಗರದ ಪಟೇಲ್ ಸರ್ಕಲ್ ಬಳಿಯ ಜೆ.ಎನ್. ರಸ್ತೆಯಲ್ಲಿರುವ ಎಸ್.ಕೆ. ಏಜೆನ್ಸಿ ಅಂಗಡಿಯಲ್ಲಿ ಮಾದಕ ಅಂಶ ಹೊಂದಿರುವ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಅಂಗಡಿ ಮಾಲೀಕನ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
​ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಕಿರಣ ಪಾಟೀಲ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ಶನಿವಾರ ಈ ದಾಳಿ ನಡೆಸಲಾಯಿತು.

 

SANAN MEWA MODAK ಪ್ಯಾಕೆಟ್‌ನಲ್ಲಿ Cannabis Sativa : ದಾಳಿಯ ವೇಳೆ ಅಂಗಡಿಯಲ್ಲಿ “SANAN MEWA MODAK (SPECIAL)” ಎಂಬ ಹೆಸರಿನ ಉತ್ಪನ್ನದ ಪ್ಯಾಕೆಟ್‌ಗಳು ಪತ್ತೆಯಾದವು. ಆ ಪ್ಯಾಕೆಟ್‌ಗಳ ಮೇಲೆ ಕ್ಯಾನಬಿಸ್ ಸಟಿವಾ ಅಂಶ ಇರುವುದಾಗಿ ನಮೂದಿಸಲಾಗಿತ್ತು.
​ಸ್ಥಳಕ್ಕೆ ಆಗಮಿಸಿದ ಸೋಕೊ ಅಧಿಕಾರಿಗಳು ಪ್ರಾಥಮಿಕ ಪರೀಕ್ಷಾ ಕಿಟ್ ಮೂಲಕ ಮಾದರಿಗಳನ್ನು ಪರೀಕ್ಷಿಸಿದಾಗ ಮಾದಕ ಅಂಶ ಇರುವುದು ಪ್ರಾಥಮಿಕವಾಗಿ ದೃಢಪಟ್ಟಿತು. ಪೊಲೀಸರು ಒಟ್ಟು 10 ಬಾಕ್ಸ್‌ಗಳಲ್ಲಿದ್ದ ಸುಮಾರು 1 ಕೆ.ಜಿ. 986 ಗ್ರಾಂ ತೂಕದ ವಸ್ತುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದಾರೆ.

​ಈ ಸಂಬಂಧ ಆರೋಪಿ ನಿರ್ಮಲನಗರದ ನಿವಾಸಿಯಾಗಿರುವ ಸಂಜಯ ಮುರಳಿಧರ ಮಹೇಶ್ವರಿ (62) ಇವರ ವಿರುದ್ಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯ ಕಲಂ 20(ಬಿ) ಅಡಿಯಿಲ್ಲಿ ಪ್ರಕರಣ ದಾಖಲಿಸಲಾಗಿದೆ.

​ದಾಳಿಯನ್ನು ಪಿ.ಎಸ್.ಐ ಕಿರಣ ಪಾಟೀಲ ನೇತೃತ್ವದ ತಂಡ ನಡೆಸಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಪಿ.ಎಸ್.ಐ ಅಮೀನ್ ಅತ್ತಾರ್ ಅವರು ಕೈಗೊಂಡಿದ್ದಾರೆ. ಈ ಮಾದಕ ವಸ್ತುಗಳ ಸರಬರಾಜು ಮತ್ತು ಮಾರಾಟದ ಜಾಲದಲ್ಲಿ ಇತರರು ಭಾಗಿಯಾಗಿರುವ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.