ಸುದ್ದಿ ಕನ್ನಡ ವಾರ್ತೆ
ಸಿದ್ದಾಪುರ:ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗ ಜಲಪಾತಕ್ಕೆ ಆಗಮಿಸಿದ್ದ ಪ್ರವಾಸಿಗರಿಗೆ ಸುರಕ್ಷಿತ ಪ್ರವಾಸದ ಕುರಿತು ಸಿದ್ದಾಪುರ ಪೊಲೀಸರು ಜಾಗೃತಿ ಮೂಡಿಸಿದರು.
ಜಲಪಾತ ವೀಕ್ಷಣೆ ವೇಳೆ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ, ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ, ಸುರಕ್ಷತಾ ಬೇಲಿಯನ್ನು ದಾಟದಂತೆ, ಸೆಲ್ಫಿ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸುವಂತೆ ಹಾಗೂ ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸುವಂತೆ ಪ್ರವಾಸಿಗರಿಗೆ ತಿಳಿಸಲಾಯಿತು.
ಮಳೆಗಾಲದಲ್ಲಿ ಜಲಪಾತದ ಸುತ್ತಮುತ್ತ ಅಪಾಯದ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಜೀವ ರಕ್ಷಣೆಗಾಗಿ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಪೊಲೀಸರು ಮನವಿ ಮಾಡಿದರು. ಸಾರ್ವಜನಿಕರಲ್ಲಿ ಸುರಕ್ಷಿತ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
