ಸುದ್ದಿ ಕನ್ನಡ ವಾರ್ತೆ

ಶಿರಸಿ: ಧಾರಾಕಾರವಾಗಿ ಸುರಿದ ಗಾಳಿ-ಮಳೆಯಿಂದಾಗಿ ಶಿರಸಿ ಗಾಂಧಿನಗರದ ಬಿ.ಟಿ. ನಾಯ್ಕ ಬಾಶಿಯವರ ಮಗ ರಾಮಚಂದ್ರ ನಾಯ್ಕ ಎಂಬುವವರ ಮನೆಯ ಮೇಲೆ ಪಕ್ಕದ ಮನೆಯ ಕಂಪೌಂಡ್ ಗೋಡೆ ಕುಸಿದು ಬಿದ್ದು, ಅಪಾರ ಹಾನಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ , ಶಿರಸಿ ಬಿಜೆಪಿ ಅಧ್ಯಕ್ಷ ಆನಂದ್ ಸಾಲೇರ ತಂಡದ ಜೊತೆ
ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, “ಸಂತ್ರಸ್ತರು ಜೊಮ್ಯಾಟೋದಲ್ಲಿ ಕೆಲಸ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕಂಪೌಂಡ್ ಕುಸಿದು ಈಗಾಗಲೇ ಹಾನಿಯಾಗಿದ್ದು, ಮತ್ತೆ ಮಳೆ ಬಂದರೆ ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ. ಈ ಬಗ್ಗೆ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.

“ರಾತ್ರಿಯ ವೇಳೆ ಪಕ್ಕದ ಮನೆಯ ಕಂಪೌಂಡ್ ಕುಸಿದು ಬಿದ್ದಿದ್ದರಿಂದ ಮನೆಯ ಹಂಚು, ಗೋಡೆ ಹಾಗೂ ನೀರಿನ ಟ್ಯಾಂಕ್ ಸಂಪೂರ್ಣ ಹಾನಿಯಾಗಿದೆ. ನಾನು ಜೊಮ್ಯಾಟೋದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಈಗ ಆಸರೆಯಿಲ್ಲದಂತಾಗಿದೆ,” ಎಂದು ಸಂತ್ರಸ್ತ ರಾಮಚಂದ್ರ ನಾಯ್ಕ ತಮ್ಮ ನೋವನ್ನು ತೋಡಿಕೊಂಡರು.

ಇದೇ ವೇಳೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ಆನಂದ್ ಸಾಲೇರ್ ಅವರು ತಕ್ಷಣವೇ ನಗರಸಭೆ ಇಂಜಿನಿಯರ್‌ಗೆ ಕರೆ ಮಾಡಿ, ಮಳೆಯಿಂದಾಗಿ ಮಣ್ಣು ಪದೇ ಪದೇ ಕುಸಿಯುತ್ತಿರುವ ಪರಿಸ್ಥಿತಿಯನ್ನು ವಿವರಿಸಿದರು. ಹಾಗೂ ಸ್ಥಳಕ್ಕೆ ಭೇಟಿ ನೀಡಿ ಹಾನಿಗೆ ತಕ್ಕ ಪರಿಹಾರ ಒದಗಿಸುವಂತೆ ವಿನಂತಿಸಿದರು. ಇದಕ್ಕೆ ಸ್ಪಂದಿಸಿದ ಇಂಜಿನಿಯರ್ ಸುಫಿಯಾನ್ ಅವರು ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದರು.

ಬಳಿಕ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಸಂತ್ರಸ್ತ ರಾಮಚಂದ್ರ ನಾಯ್ಕ ಅವರಿಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯ ಹಸ್ತಾಂತರಿಸಿ, “ನಾವು ನಿಮ್ಮೊಂದಿಗಿದ್ದೇವೆ” ಎಂದು ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ಹಾಗೂ ನಗರಸಭೆ ಮಾಜಿ ಉಪಾಧ್ಯಕ್ಷ ರಮಾಕಾಂತ್ ಭಟ್ ಉಪಸ್ಥಿತರಿದ್ದರು.