ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ತಾಲೂಕಿನ ಪ್ರಮುಖ ಸಹಕಾರಿ ಸಂಸ್ಥೆಯಾದ ಪಟ್ಟಣದ ಟಿಎಂಎಸ್ ಆಡಳಿತ ಮಂಡಳಿಗೆ ನಡೆದಿದ್ದ ಸಾರ್ವತ್ರಿಕ ಚುನಾವಣೆಯ ಬಹುನಿರೀಕ್ಷಿತ ಮತ ಎಣಿಕೆ ಪ್ರಕ್ರಿಯೆಯು ಸುದೀರ್ಘ 9 ತಿಂಗಳುಗಳ ನಂತರ ಕೊನೆಗೂ ಯಶಸ್ವಿಯಾಗಿ ನಡೆದಿದ್ದು, ನಿಕಟಪೂರ್ವ ಅಧ್ಯಕ್ಷ ಎನ್.ಕೆ.ಭಟ್ ಅಗ್ಗಾಶಿಕುಂಬ್ರಿ ನೇತೃತ್ವದ ತಂಡವು ಭರ್ಜರಿ ಜಯಭೇರಿ ಬಾರಿಸಿದೆ.

​​ಸಂಸ್ಥೆಯ ಆಡಳಿತ ಮಂಡಳಿಯ ಒಟ್ಟು 14 ನಿರ್ದೇಶಕ ಸ್ಥಾನಗಳಿಗೆ ನಡೆದ ಈ ಚುನಾವಣೆಯಲ್ಲಿ ನಾರಾಯಣ ಭಟ್ ಅಗ್ಗಾಶಿಕುಂಬ್ರಿ ಅವರ ಸಾರಥ್ಯದ ತಂಡವು ಬರೋಬ್ಬರಿ 12 ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಎದುರಾಳಿ ಬಟ್ಲಗುಂಡಿ ತಂಡವು ಕೇವಲ 2 ಸ್ಥಾನಗಳನ್ನು ಪಡೆಯಲಷ್ಟೇ ಶಕ್ತವಾಗಿದೆ.

​ಅಗ್ಗಾಶಿಕುಂಬ್ರಿ ತಂಡ:
​ಪ್ರಾಥಮಿಕ ಸಹಕಾರಿ ಸಂಘಗಳ ವಿಭಾಗ: ನರಸಿಂಹ ಕೋಣೆಮನೆ, ಮಂಜುನಾಥ ಮಹಾದೇವ ಹೆಗಡೆ ಜಡ್ಡಿಗದ್ದೆ, ಗಣಪತಿ ಹೆಗಡೆ ಹಿತ್ಲಳ್ಳಿ ಹಾಗೂ ಸುಬ್ಬಣ್ಣ ಬೋಳ್ಮನೆ.
​ಸಾಮಾನ್ಯ ವಿಭಾಗ: ನಾರಾಯಣ ಭಟ್ ಅಗ್ಗಾಶಿಕುಂಬ್ರಿ ಮತ್ತು ವೆಂಕಟರಮಣ ಭಟ್ ಕಿರಕುಂಭತ್ತಿ
​ಮಹಿಳಾ ಮೀಸಲಾತಿ ವಿಭಾಗ: ಸೀತಾ ಮೆಣಸುಮನೆ ಹಾಗೂ ಸೌಮ್ಯ ಕಿಚ್ಚುಪಾಲ.
​’ಅ’ ವರ್ಗದ ವಿಭಾಗ: ಅಪ್ಪು ಆಚಾರಿ.
​ಪರಿಶಿಷ್ಟ ಪಂಗಡ ವಿಭಾಗ: ಸಾಲು ಸಿದ್ದಿ.
​ಬಟ್ಲಗುಂಡಿ ತಂಡ:
​ಪ್ರಾಥಮಿಕ ಸಹಕಾರಿ ಸಂಘಗಳ ವಿಭಾಗ: ಗಣಪತಿ ಮುದ್ದೇಪಾಲ, ಆರ್.ಎನ್. ಹೆಗಡೆ ಗೋರ್ಸಗದ್ದೆ.ಆಡಳಿತ ಮಂಡಳಿಯ ಒಟ್ಟು 14 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಹನುಮಂತ ಕೊರವರ ಹಾಗೂ ಹಿಂದುಳಿದ ‘ಬಿ’ ವರ್ಗದ ಕ್ಷೇತ್ರದಿಂದ ರಾಜೇಂದ್ರ ಗೌಡರ ಅವರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 12 ಪ್ರಮುಖ ಸ್ಥಾನಗಳಿಗೆ ನಡೆದಿದ್ದ ತೀವ್ರ ಪೈಪೋಟಿಯ ಚುನಾವಣೆಯಲ್ಲಿ ಅಗ್ಗಾಶಿಕುಂಬ್ರಿ ನೇತೃತ್ವದ ಬಣವು 10 ಸ್ಥಾನಗಳನ್ನು ಪಡೆದರೆ, ಬಟ್ಲಗುಂಡಿ ಬಣವು ಕೇವಲ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು.
​ಕಾನೂನಾತ್ಮಕ ಕಾರಣಗಳಿಂದಾಗಿ ಮತದಾನ ಮುಗಿದು ಒಂಬತ್ತು ತಿಂಗಳುಗಳ ಕಾಲ ತಡೆಹಿಡಿಯಲ್ಪಟ್ಟಿದ್ದ ಈ ಮತ ಎಣಿಕೆ ಪ್ರಕ್ರಿಯೆಯು ಮುಕ್ತಾಯಗೊಳ್ಳುತ್ತಿದ್ದಂತೆ, ವಿಜೇತ ಅಗ್ಗಾಶಿಕುಂಬ್ರಿ ತಂಡದ ಬೆಂಬಲಿಗರು ಹಾಗೂ ಸಹಕಾರಿ ಧುರೀಣರು ಪಟಾಕಿ ಸಿಡಿಸಿ, ಸಿಹಿ ಹಂಚಿ ಭವ್ಯ ವಿಜಯೋತ್ಸವ ಆಚರಿಸಿದರು. ತಾಲೂಕಿನ ಸಹಕಾರಿ ವಲಯದಲ್ಲಿ ಈ ಫಲಿತಾಂಶವು ತೀವ್ರ ಕುತೂಹಲ ಮೂಡಿಸಿದೆ.