ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ಕರಂಜೋಯಿಡಾ ಗ್ರಾಮದಲ್ಲಿ ಹುಲಿ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಸುಮಾರು 15 ದಿನಗಳ ಹಿಂದೆ ಖಾನಗಾಂವ ಗ್ರಾಮದ ನಿವಾಸಿ ರಾಮನಾಥ ಗಾವಡಾ ಅವರ ಎತ್ತನ್ನು ಅವರ ತೋಟದಲ್ಲಿ ಹುಲಿ ಹಿಡಿದು ಕುತ್ತಿಗೆಯ ಭಾಗವನ್ನು ತಿಂದು ಹಾಕಿದ ಘಟನೆ ನಡೆದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರ ನೀಡುವ ಭರವಸೆ ನೀಡಿ ತೆರಳಿದ್ದಾರೆ.
ಇದರ ಬೆನ್ನಲ್ಲೇ ನಿನ್ನೆ ಮತ್ತೊಮ್ಮೆ ಗ್ರಾಮದ ಮತ್ತೊಂದು ಎತ್ತಿನ ಮೇಲೆ ಹುಲಿ ದಾಳಿ ನಡೆಸಿದೆ. ಹೊಲದ ಬದಿಯಲ್ಲಿ ಮೇಯುತ್ತಿದ್ದ ಎತ್ತಿನ ಮೇಲೆ ಹುಲಿ ದಾಳಿ ಮಾಡಿದಾಗ, ಜಾನುವಾರುಗಳನ್ನು ಕಾಯುತ್ತಿದ್ದ ರಮೇಶ ಜೋರಾಗಿ ಕೂಗಿದ ಪರಿಣಾಮ ಹುಲಿ ಅಲ್ಲಿಂದ ಓಡಿ ಹೋಗಿದೆ ಎಂದು ತಿಳಿದುಬಂದಿದೆ.
ಆದರೆ ದಾಳಿಯಲ್ಲಿ ಎತ್ತಿನ ಕುತ್ತಿಗೆಯ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಗಾಯದ ಪರಿಣಾಮ ಅದು ಆಹಾರ ಸೇವಿಸದೇ ಬಳಲುತ್ತಿದೆ ಎಂದು ಮಾಲೀಕರು ತಿಳಿಸಿದ್ದಾರೆ.
ಗ್ರಾಮದಲ್ಲಿ ನಿರಂತರವಾಗಿ ಹುಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಂಡು ಜನರು ಹಾಗೂ ಜಾನುವಾರುಗಳ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
