ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆ, ಶಿಂದೋಳಿ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರಾರಂಭೋತ್ಸವ ಹಾಗೂ ಪಾಲಕರ ಶಿಕ್ಷಕರ ಮಹಾಸಭೆಯನ್ನು ಉತ್ಸಾಹದಿಂದ ಹಮ್ಮಿಕೊಳ್ಳಲಾಯಿತು.

ಶಾಲೆಯ ಆವರಣವನ್ನು ತಳಿರುತೋರಣಗಳಿಂದ ಶೃಂಗರಿಸಿ, ಶಾಲಾ ಪರಿಸರದ ಪ್ರಮುಖ ಬೀದಿಯಲ್ಲಿ ಶಾಲೆಯ ಎಸ್ಡಿಎಂಸಿ ಪದಾಧಿಕಾರಿಗಳು,ಪಾಲಕರು, ಪೋಷಕರು,ಶಿಕ್ಷಕರು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆ, ಹಳೆಯವಿದ್ಯಾರ್ಥಿಗಳನ್ನೊಳಗೊಂಡ ಬಿತ್ತಿಚಿತ್ರ, ವಾದ್ಯ ಸಹಿತ ಮೆರವಣಿಗೆಯ ಮೂಲಕ ಒಂದನೇಯ ತರಗತಿಗೆ ಹೊಸದಾಗಿ ದಾಖಲಾದ ಹಾಗೂ ಉಳಿದ ವಿದ್ಯಾರ್ಥಿಗಳನ್ನು ಹೂ ಗುಚ್ಛ ನೀಡುವ ಮೂಲಕ ಸ್ವಾಗತಿಸಲಾಯಿತು.

ನಂತರ ನಡೆದ ಪಾಲಕರ- ಶಿಕ್ಷಕರ ಮಹಾಸಭೆಯಲ್ಲಿ ಶಾಲೆಯ ಸಹ ಶಿಕ್ಷಕರಾದ ಆನಂದ ಪಿ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ ಅವರು ಮಾತನಾಡಿ ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರಾರಂಭೋತ್ಸವ ಹಾಗೂ ಶಿಕ್ಷಣದ ಅವಶ್ಯಕತೆ, ಸರ್ಕಾರಿ ಶಾಲೆಯಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ, ಬಿಸಿಯೂಟ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಜೊತೆಯಲ್ಲಿ ಸ್ಮಾರ್ಟ್ ಕ್ಲಾಸ್,ವಾರ್ಷಿಕ ಸ್ನೇಹ ಸಮ್ಮೇಳನ,ಶೈಕ್ಷಣಿಕ ಪ್ರವಾಸ, ಇನ್ನಿತರ ವಿವಿಧ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳುವಂತೆ, ಮಕ್ಕಳಿಗೆ ಶಿಸ್ತಿನ ಜೊತೆಗೆ ಕ್ರೀಡೆಗೆ, ಸೃಜನಾತ್ಮಕ ಕಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪಾಲಕರೂ ಶಿಕ್ಷಕರೊಂದಿಗೆ ಸಹಕಾರ ನೀಡುತ್ತ ಮಗುವಿನ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಿದಂತೆ ಆಗುತ್ತದೆ ಸರಕಾರಿ ಶಾಲೆಯನ್ನು ಉಳಿಸುವತ್ತ ಪಾಲಕರು ಪೋಷಕರು ಹೆಚ್ಚು ಗಮನಹರಿಸಬೇಕೆಂದು ಕೋರಿದರು. ಅದೇ ರೀತಿಯಾಗಿ ಶಾಲೆಯ ಎಸ್ಡಿಎಂಸಿ ಪದಾಧಿಕಾರಿಗಳು, ಪಾಲಕರು, ಪೋಷಕರು ಶಾಲೆಯ ಶೈಕ್ಷಣಿಕ ವಿಭಾಗದ ಎಲ್ಲಾ ಕ್ಷೇತ್ರದ ಬೆಳವಣಿಗೆಗೆ ಈ ಹಿಂದೆ ಉತ್ತಮ ಸಹಕಾರ ನೀಡಿದ ರೀತಿಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿಯೂ ಮುಂದುವರೆಯಲಿ ಎಂದು ವಿನಂತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ರೀಯಾಶೀಲ ಎಸ್ಡಿಎಂಸಿ ಅಧ್ಯಕ್ಷರಾದ ಗುರುನಾಥ ಮಾಜಾಳಕರ ಮಾತನಾಡಿ ಇಲ್ಲಿನ ಸರ್ವ ಪಾಲಕರ-ಪೋಷಕರ ಹಾಗೂ ಶಿಕ್ಷಕರ,ಇಲಾಖೆಯ ಸಹಕಾರದಿಂದ ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಶೈಕ್ಷಣಿಕ ಅಭಿವೃದ್ಧಿಗೆ ನಮ್ಮೆಲ್ಲರ ಸಹಕಾರ ನಿರಂತರ ಇರಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು. ಮಧ್ಯಾಹ್ನ ಸಿಹಿಯನ್ನು ವಿತರಿಸಲಾಯಿತು.ಶಾಲೆಯ ಸಹ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಕೊನೆಯಲ್ಲಿ ಎಲ್ಲರಿಗೂ ವಂದನೆಯನ್ನು ಸಲ್ಲಿಸಲಾಯಿತು.