ಸುದ್ದಿ ಕನ್ನಡ ವಾರ್ತೆ
ಜೊಯಿಡಾ;ತಾಲೂಕಿನ ಪ್ರಮುಖ ಸಾಹಸ ಜಲಕ್ರೀಡೆ ತಾಣವಾಗಿರುವ ಗಣೇಶಗುಡಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ದುಸ್ಥಿತಿಯಿಂದ ಪ್ರಯಾಣಿಕರು ಹಾಗೂ ಪ್ರವಾಸಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ . ಉಸೋಡಾ ದಿಂದ ಮುಂದೆ ದಾಂಡೇಲಿ ವರೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದು, ದೊಡ್ಡ ದೊಡ್ಡ ಹೊಂಡಗಳಿಂದ ವಾಹನ ಸಂಚಾರ ದುಸ್ತರವಾಗಿದೆ.
ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಸ್ಥಳೀಯರು ಹಾಗೂ ಗೋವಾ ಖಾನಾಪೂರ–ಬೆಳಗಾವಿ ಕಡೆ ಸಂಚರಿಸುವ ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿವೆ. ಆದರೆ ರಸ್ತೆ ಬದಿಗಳು ಎದ್ದು ಹೋಗಿದ್ದು, ಶಿಂಗರಗಾಂವ–ಜಗಲಬೇಟ ರಸ್ತೆ ಶೋಲ್ಡರ್ ಕೂಡ ಕಿತ್ತು ಹೋಗಿರುವುದರಿಂದ ವಾಹನ ಚಾಲಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಬೈಕ್ ಸವಾರರು ಗುಂಡಿಗಳಲ್ಲಿ ಬಿದ್ದು ಅಪಘಾತಕ್ಕೊಳಗಾಗುತ್ತಿರುವ ಘಟನೆಗಳು ಹೆಚ್ಚುತ್ತಿವೆ.
ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಮತ್ತಷ್ಟು ಹದಗೆಡುವ ಆತಂಕ ವ್ಯಕ್ತವಾಗಿದೆ. ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
