ಸುದ್ದಿ ಕನ್ನಡ ವಾರ್ತೆ
ಕಾರವಾರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಮಾಜಾಳಿ ಬಳಿ ಕಾರು ಹಾಗೂ ಆಟೋ ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿ ಆಟೋ ಚಾಲಕ ಮೃತಪಟ್ಟ ಘಟನೆ ನಡೆದಿದೆ.

ತಾಲೂಕಿನ ಮಾಜಾಳಿ ಸಮೀಪ ಈ ದುರ್ಘಟನೆ ನಡೆದಿದ್ದು, ಡಿಕ್ಕಿಯ ತೀವ್ರತೆಗೆ ಆಟೋ ರಿಕ್ಷಾಹೆದ್ದಾರಿಯಲ್ಲೇ ಉರುಳಿ ಬಿದ್ದರೆ, ಕಾರು ರಸ್ತೆ ಕೆಳಭಾಗಕ್ಕೆ ಉರುಳಿ ಬಿದ್ದಿದೆ.
ಅಪಘಾತದ ಪರಿಣಾಮ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಂಚಾರವನ್ನು ಸುಗಮಗೊಳಿಸಿದರು.

ಘಟನೆಯಲ್ಲಿ ಆಟೋ ಚಾಲಕರಾದ ಪ್ರದೀಪ ಪೆಡ್ನೇಕರ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಅಪಘಾತಕ್ಕೀಡಾದ ಕಾರು ತಮಿಳುನಾಡು ನೋಂದಣಿಯ ಮಾರುತಿ ಬೀಝಾ ಕಾರು ಎಂದು ತಿಳಿದುಬಂದಿದೆ.

ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.