ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ದಿನಾಂಕ:23/05/2026 ರಂದು ಶ್ರೀಕ್ಷೇತ್ರ ಉಳವಿಯಲ್ಲಿ
ಶ್ರೀ ಚನ್ನಬಸವೇಶ್ವರ ಹೈಸ್ಕೂಲ್ ಉಳವಿಯ ಹಳೆಯ ವಿದ್ಯಾರ್ಥಿಗಳು ವಿದ್ಯಾಲಯ ಪ್ರಾರಂಭವಾದ 40 ವರ್ಷಗಳ ನಂತರ ಪ್ರಾರಂಭದಿಂದ ಕಳೆದ ವರ್ಷದವರೆಗಿನ ಎಲ್ಲಾ ವಿದ್ಯಾರ್ಥಿಗಳು ಸೇರಿ “ಗುರುವಂದನಾ” ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಬಸವರಾಜ ಪಾಟೀಲ ಪ್ರಧಾನ ಸಂಘಟನಾ ಕಾರ್ಯದರ್ಶಿಗಳು, ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ, ನವದೆಹಲಿರವರು ದೀಪ ಪ್ರಜ್ವಲಿಸುವ ಮೂಲಕ ನೆರವೇರಿಸಿದರು. ಉದ್ಘಾಟನಾ ಭಾಷಣದಲ್ಲಿ ಮಾನ್ಯರವರು ಈಶಾನ್ಯ ಭಾರತದಲ್ಲಿನ ಪರಿಸ್ಥಿತಿಯನ್ನು ಮನಮುಟ್ಟುವಂತೆ ವಿವರಿಸಿ ಉಳವಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ತಮ್ಮಿಂದ ಆಗುವ ಸಹಕಾರ ನೀಡುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚನ್ನಬಸವೇಶ್ವರ ಟ್ರಸ್ಟ್ ಕಮಿಟಿಯ ಉಳವಿ ಅಧ್ಯಕ್ಷರಾದ ಶ್ರೀ ಸಂಜಯ ಕಿತ್ತೂರರವರು ವಹಿಸಿದ್ದರು.ಶಾಲಾ ಕಮಿಟಿ ಅಧ್ಯಕ್ಷರಾದ ಶ್ರೀ ಪ್ರಕಾಶ ಕಿತ್ತೂರ, ಕಮಿಟಿಯ ಸದಸ್ಯರಾದ ವೀರೇಶ ಕಂಬಳಿ ಪ್ರಧಾನ ಗುರುಗಳಾದ ಶ್ರೀ ಎಸ್ ಆರ್. ನರಸಣ್ಣನವರ್ ಹಾಗೂ ಇತರ ಗಣ್ಯರು ವೇದಿಕೆಯನ್ನು ಅಲಂಕರಿಸಿದ್ದರು.
1986 ರಿಂದ 2026 ರ ವರೆಗಿನ ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು ಸೇರಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಶ್ರೀ ಜಗದೀಶ ಹಾರುಗೊಪ್ಪ ಹನಮಂತ ಪೂಜಾರಿ,ಮಾಧವ ಗಾಂವ್ಕರ,ಅನಿಲಕುಮಾರ ಬಿರಾದಾರ ಇತರರು ಶ್ರಮಿಸಿದರು. ವಾಸುದೇವ ಭಾಗ್ವತರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಶಾಲೆಯ ಹಳೆಯ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಶ್ರೀ ಶಿವರಾಮ ಗಾಂವ್ಕರರವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ ತಮ್ಮದೇ ಶೈಲಿಯಲ್ಲಿ ನೆರೆದವರನ್ನೆಲ್ಲಾ ಮಂತ್ರಮುಗ್ಧರನ್ನಾಗಿಸಿ ಗುರು-ಶಿಷ್ಯರ ಸಂಬಂಧ ಹಾಗೂ ಗುರುವಂದನಾ ಕಾರ್ಯಕ್ರಮದ ಮಹತ್ವವನ್ನು ಸ್ಮರಿಸಿದರು.
ಶಾಲೆಯ ಎಲ್ಲಾ ಗುರುಗಳನ್ನು ಹಾಗೂ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಇದೇ ತಿಂಗಳು ನಿವೃತ್ತಿ ಹೊಂದುತ್ತಿರುವ ಸುರೇಶ ಹುಬ್ಬಳ್ಳಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಶಾಲೆಯ ಗುರುವರ್ಯರಾಗಿದ್ದ ನಿವೃತ್ತ ಜೀವನ ನಡೆಸುತ್ತಿರುವ ಶ್ರೀ ಬೂದಿಹಾಳ, ಶ್ರೀ ನಾಗಶೆಟ್ಟಿಕೊಪ್ಪ ಶ್ರೀ ಆರ್. ಜಿ. ಭಟ್ ಹಾಗೂ ಶ್ರೀ ಹಿರೇಮಠ ರವರು, ಅಭೂತಪೂರ್ವ ಕಾರ್ಯಕ್ರಮವನ್ನು ಹಮ್ಮಿ ಕೊಂಡು ತಮ್ಮನ್ನು ಸನ್ಮಾನಿಸಿದ ಶಿಷ್ಯವೃಂದವನ್ನು ಆಶೀರ್ವದಿಸಿ ಭಾವಕವಾಗಿ ಮಾತನಾಡಿದರು. ಎಲ್ಲ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳಾದ ಶ್ರೀ. ಎನ್. ಸಿ. ದ್ಯಾಬೇರಿ, ಶ್ರೀ ಕರಲಿಂಗಣ್ಣನವರ ಹಾಗೂ ಶ್ರೀ ಸಂಗಯ್ಯ ಶಾಸ್ತ್ರಿಗಳು ತಮ್ಮೊಂದಿಗೆ ಇಲ್ಲದಿದ್ದರೂ ಅವರ ಕುಟುಂಬದವರನ್ನು ಕರೆಸಿ ಸನ್ಮಾನಿಸಿರುವುದು ಶ್ಲಾಘನೀಯ.
ಒಟ್ಟಾರೆಯಾಗಿ “ಗುರು ವಂದನಾ” ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿರುವುದು ಎಲ್ಲರ ಮುಖದಲ್ಲಿ ಸಾರ್ಥಕತೆಯನ್ನು ಕಂಡಿತು ಹಾಗೂ ಎಲ್ಲಾ ಹಳೆಯ ವಿದ್ಯಾರ್ಥಿಗಳು ತಮ್ಮ- ತಮ್ಮ ಊರಿನೆಡೆಗೆ ಪ್ರಯಾಣ ಬೆಳೆಸಿದರು. ಕರ್ನಾಟಕದ ಉದ್ದಗಲಕ್ಕೂ ವಿಸ್ತರಿಸಿದ್ದ ಶಿಷ್ಯವೃಂದ, ಗುಲ್ಬರ್ಗಾ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಬೆಂಗಳೂರು, ಮೈಸೂರು, ಹೈದರಾಬಾದ್ ಸೇರಿದಂತೆ ಇತ್ಯಾದಿ ಸ್ಥಳಗಳಿಂದ ಬಂದು ‘ಗುರುವಂದನಾ’ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ.
