ಸುದ್ದಿ ಕನ್ನಡ ವಾರ್ತೆ
ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋದ ಸಂದರ್ಭದಲ್ಲಿ, ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಅತ್ಯಂತ ದುಃಖಕರ ಮತ್ತು ಹೃದಯವಿದ್ರಾವಕವಾಗಿದೆ ಎಂದು ಸಂಸದ ಕಾಗೇರಿ ಯವರು ಕಂಬನಿ ಮಿಡಿದಿದ್ದಾರೆ.

​ಇದೊಂದು ಅತ್ಯಂತ ದುರದೃಷ್ಟಕರ ಮತ್ತು ತೀವ್ರ ನೋವಿನ ಘಟನೆಯಾಗಿದೆ. ವಿಧಿಯ ಆಟಕ್ಕೆ ಒಂದೇ ಕುಟುಂಬದ ಎಂಟು ಜೀವಗಳು ಬಲಿಯಾಗಿರುವುದು ಇಡೀ ಸಮಾಜವನ್ನೇ ಕಂಗೆಡಿಸಿದೆ. ಮೃತರ ಆತ್ಮಕ್ಕೆ ಆ ಭಗವಂತನು ಸದ್ಗತಿಯನ್ನು ಕರುಣಿಸಲಿ. ಕರಳುಬಳ್ಳಿಯ ನಂಟನ್ನು ಕಳೆದುಕೊಂಡು ತೀವ್ರ ಆಘಾತದಲ್ಲಿರುವ ಕುಟುಂಬದ ಸದಸ್ಯರಿಗೆ ಹಾಗೂ ಹಿತೈಷಿಗಳಿಗೆ ಈ ಭರಿಸಲಾಗದ ಅತೀವ ದುಃಖ ಮತ್ತು ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

​”ಸಂತ್ರಸ್ತ ಕುಟುಂಬಗಳಿಗೆ ಆಸರೆಯಾಗಲು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಸೂಕ್ತ ಮತ್ತು ಗರಿಷ್ಠ ಪ್ರಮಾಣದ ಆರ್ಥಿಕ ಪರಿಹಾರವನ್ನು ಒದಗಿಸಿಕೊಡಲು ನಾನು ಕ್ಷೇತ್ರದ ಸಂಸದನಾಗಿ ಪ್ರಾಮಾಣಿಕ ಮತ್ತು ಶಕ್ತಿಮೀರಿದ ಪ್ರಯತ್ನವನ್ನು ಮಾಡಲಿದ್ದೇನೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಕೇಂದ್ರ ಸರ್ಕಾರದ ಸಚಿವಾಲಯ ಹಾಗೂ ಅಧಿಕಾರಿಗಳೊಂದಿಗೆ ತಕ್ಷಣವೇ ಮಾತುಕತೆ ನಡೆಸಿ, ಪರಿಹಾರ ಬಿಡುಗಡೆಗೆ ಅಗತ್ಯ ಕ್ರಮ ವಹಿಸಲಾಗುವುದುಎಂದು ವಿಶ್ವೇಶ್ವರ ಹೆಗಡೆ ಕಾಗೇರಿ,ಸಂಸದರು ಉತ್ತರ ಕನ್ನಡ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.