ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಶಿರಸಿ-ಯಲ್ಲಾಪುರ ರಸ್ತೆಯ ದೇವನಿಲಯದ ಸಮೀಪ ಬಸ್, ಲಾರಿ ಹಾಗೂ ಮಿನಿ ಗೂಡ್ಸ್ ವಾಹನಗಳ ನಡುವೆ ಭಾರೀ ಸರಣಿ ಅಪಘಾತ ಸಂಭವಿಸಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ದೇವನಿಲಯದ ಬಳಿ ಬಸ್ಸೊಂದು ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ, ಹಿಂದಿನಿಂದ ವೇಗವಾಗಿ ಬಂದ ಅನಾನಸ್ ತುಂಬಿದ್ದ ಮಿನಿ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಮಿನಿ ಗೂಡ್ಸ್ ವಾಹನದ ಹಿಂದೆಯೇ ಬರುತ್ತಿದ್ದ ಕೆಂಪುಕಲ್ಲು ತುಂಬಿದ್ದ ಲಾರಿಯು ಕೂಡ ನಿಯಂತ್ರಣ ತಪ್ಪಿ ಮಿನಿ ವಾಹನಕ್ಕೆ ಹಿಂಬದಿಯಿಂದ ಅಪ್ಪಳಿಸಿದೆ.
ಅಪಘಾತದ ಪರಿಣಾಮ ಮೂರು ವಾಹನಗಳು ಜಖಂಗೊಂಡಿದ್ದು, ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಕೆಲಕಾಲ ಉಭಯ ದಿಕ್ಕುಗಳಲ್ಲೂ ವಾಹನಗಳ ಉದ್ದ ಸಾಲು ನಿರ್ಮಾಣವಾಗಿ ಪ್ರಯಾಣಿಕರು ಪರದಾಡುವಂತಾಯಿತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು. ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
