ಸುದ್ದಿ ಕನ್ನಡ ವಾರ್ತೆ
ಕುಮಟಾ: ತಾಲೂಕಿನ ಕೂಜಳ್ಳಿ ಮತ್ತು ಮಲ್ಲಾಪುರ ಗಡಿಭಾಗದಲ್ಲಿ ನೆಲೆಸಿರುವ ಶ್ರೀ ಗಡಿ ಮಹಾಸತಿ ಮತ್ತು ಶ್ರೀ ನಾಗಯಕ್ಷೇ ದೇವರ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮ ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ವಿಜೃಂಭಣೆಯಿಂದ ಸಂಪನ್ನ ಗೊಂಡಿತು.
ಸರಿಸುಮಾರು 150 ವರ್ಷಗಳ ಹಿಂದೆ ಮಹಾಲೆ ಕುಟುಂಬದ ವಿಠೋಬಾ ಕೃಷ್ಣ ಮಹಾಲೆ ಅವರು ಪ್ರತಿಷ್ಠಾಪಿಸಿದ ಶ್ರೀ ಗಡಿ ಮಹಾಸತಿ ಮತ್ತು ಶ್ರೀ ನಾಗಯಕ್ಷೇ ದೇವರ ಕ್ಷೇತ್ರ ಈಗ ಎಲ್ಲ ಸಮಾಜಗಳ ಧಾರ್ಮಿಕ ಶ್ರದ್ಧಾಕೇಂದ್ರವಾಗಿದೆ.
ಕೂಜಳ್ಳಿ ಮತ್ತು ಮಲ್ಲಾಪುರ ಗಡಿಭಾಗದಲ್ಲಿ ನೆಲೆಸಿರುವ ಶ್ರೀದೇವರ ಪುನರ್ ಪ್ರತಿಷ್ಠಾ ಕಾರ್ಯಕ್ರಮ ಮೇ 13 ಮತ್ತು 14ರಂದು ಅದ್ಧೂರಿಯಾಗಿ ನಡೆಯಿತು. ಮೇ 13ರ ಸಂಜೆ ದೇವತಾ ಪ್ರಾರ್ಥನೆ ಶ್ರೀ ಗುರು ಗಣಪತಿ ಪೂಜಾ, ಶುದ್ದಿ ಕರ್ಮ, ಮಹಾ ಸಂಕಲ್ಪ, ರಾಕ್ಷೆಘ್ನ, ವಾಸ್ತು ವಿಧಾನಗಳು, ಅಧಿವಾಸ ಹೋಮ ಮತ್ತು ಬಲಿಹರಣ ಧಾರ್ಮಿಕ ಕಾರ್ಯಕ್ರಮ ಸಾಂಗವಾಗಿ ನಡೆಯಿತು.
ಮೇ 14ರಂದು ನವಗ್ರಹ ಹೋಮ, ಶುದ್ದಿ ಹೋಮ, ಮಿಥುನ ಲಗ್ನ ಶುಭ ಮುಹೂರ್ತದಲ್ಲಿ ದೇವರ ಪ್ರತಿಷ್ಠೆ, ತತ್ವ ಕಲಾ ಹೋಮ, ಶ್ರೀ
ನಾಗ ಮತ್ತು ಯಕ್ಷಿ ಮೂಲ ಮಂತ್ರ ಹೋಮ ಶಾಂತಿ ಪ್ರಾಯಶ್ಚಿತ ಹೋಮ, ಮಹಾ ಪೂರ್ಣಾಹುತಿ ಬಳಿಕ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಡೆಯಿತು. ಭಕ್ತಾಧಿಗಳು ಶ್ರೀದೇವರಿಗೆ ಹಣ್ಣುಗಾಯಿ, ಬಾಳೆಗೊನೆ ಪೂಜಾ ಸೇವೆ ಸಮರ್ಪಿಸಿ ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು. ಮಧ್ಯಾಹ್ನ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು
ಪ್ರಸಾದ ಭೋಜನ ಸ್ವೀಕರಿಸಿ, ಧನ್ಯತೆ ಮೆರೆದರು.
ಧಾರ್ಮಿಕ ಸಂಜೆ ಸಭಾ ಕಾರ್ಯಕ್ರಮ ನಡೆಯಿತು. ಗಣ್ಯರೆಲ್ಲ ಆಗಮಿಸಿ ವೇದಿಕೆ ಹಂಚಿಕೊಂಡು ಮಹಾಲೆ ಕುಟುಂಬದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆನಂದ ಮಹಾಲೆ ಕೂಜಳ್ಳಿಯವರಿಂದ ಭಜನಾ ಕಾರ್ಯಕ್ರಮ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ನಡೆಯಿತು. ರಾತ್ರಿ 9 ಗಂಟೆಗೆ ಧರ್ಮಾಂಗದ ದಿಗ್ವಿಜಯ ಯಕ್ಷಗಾನ ಪ್ರದರ್ಶನಗೊಂಡಿತು.
ಶ್ರೀ ಗಡಿ ಮಹಾಸತಿ ನಾಗಯಕ್ಷೆ ಸೇವಾ ಟ್ರಸ್ಟ್ ಅಧ್ಯಕ್ಷರಾದ ಸತೀಶ್ ರಮಾಕಾಂತ ಮಹಾಲೆ, ಕಾರ್ಯದರ್ಶಿ ಸುರೇಶ ಮಹಾಲೆ ನೇತೃತ್ವದಲ್ಲಿ ಊರಿನ ಎಲ್ಲರ ಸಹಕಾರದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
