Banner Ad

ಸುದ್ದಿ ಕನ್ನಡ ವಾರ್ತೆ
​​ಯಲ್ಲಾಪುರ: ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಜ್ರಮಹೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮೇ 12 ರಂದು ಸಂಘದ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನಾಗರಾಜ ಕವಡಿಕೇರಿ ಹೇಳಿದರು.

​ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಬೆಳಗ್ಗೆ 10:30 ಕ್ಕೆ ವಜ್ರಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ನೂತನ ಕಟ್ಟಡವನ್ನು ಶಾಸಕ ಶಿವರಾಮ ಹೆಬ್ಬಾರ, ಸಭಾಭವನವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮೀಟಿಂಗ್ ಹಾಲ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3 ಕ್ಕೆ ನಡೆಯುವ ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು ಹಾಗೂ ಮಾಜಿ ಮುಖ್ಯ ಕಾರ್ಯನಿರ್ವಹಕರುಗಳನ್ನು ಸನ್ಮಾನಿಸಲಾಗುವುದು. ಸಂಜೆ 5:30 ಕ್ಕೆ ಸಂಘದ ಭದ್ರತಾ ಕೊಠಡಿಯನ್ನು ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿ, ಸಮಾರೋಪ ಸಮಾರಂಭದ ಸಾನಿಧ್ಯ ವಹಿಸುವರು. ರಾತ್ರಿ 8:30 ಕ್ಕೆ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರಿಂದ ‘ಚಂದ್ರಹಾಸ ಚರಿತ್ರೆ’ ಹಾಗೂ ‘ಮಾಯಾ ಮೃಗಾವತಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.

Banner Ad

​1950ರಲ್ಲಿ 10 ಸದಸ್ಯರಿಂದ ಆರಂಭವಾದ ಸಂಘವು ಈಗ 3500 ಸದಸ್ಯರನ್ನು ಹೊಂದಿದೆ. ಉಪಳೇಶ್ವರ ಹಾಗೂ ನಂದೊಳ್ಳಿಯಲ್ಲಿ ಶಾಖೆಗಳನ್ನು ಹೊಂದಿದ್ದು, ಸದಸ್ಯರಿಗಾಗಿ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆಪತ್ ರಕ್ಷೆ, ಚಿಕಿತ್ಸೆಗೆ ಸಹಾಯ, ವಿದ್ಯಾರ್ಥಿ ವೇತನ, ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ, ಅಂತ್ಯ ಸಂಸ್ಕಾರ ನಿಧಿ, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಹಲವು ವಿಧಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಸಂಘದ ಮೂಲಕ ಮಹಸೂಲು ವಿಕ್ರಿ, ಆರ್.ಟಿ.ಜಿ.ಎಸ್ ವ್ಯವಸ್ಥೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳಿಗೆ ಹೊಂದಿಕೊಂಡು ಉತ್ತಮ ಸೇವೆ ನೀಡುವಲ್ಲಿ ಶ್ರಮಿಸುತ್ತಿದೆ ಎಂದರು.
​ಸಂಘದ ಉಪಾಧ್ಯಕ್ಷ ಟಿ.ಆರ್.ಹೆಗಡೆ,ನಿರ್ದೇಶಕರಾದ ಸುಬ್ಬಣ್ಣ ದಾನ್ಯನಕೊಪ್ಪ, ಅಪ್ಪು ಆಚಾರಿ, ಮಹಾಬಲೇಶ್ವರ ಭಟ್ಟ ಮಾಲದಮನೆ, ಗಾಬ್ರಿಯಲ್, ಗೋಪಾಲಕೃಷ್ಣ ಭಟ್ಟ, ಗಣಪತಿ ಕವಡಿಕೇರಿ, ಮುಖ್ಯಕಾರ್ಯನಿರ್ವಾಹಕ ಎಂ.ಎಸ್ ಹೆಗಡೆ ಉಪಸ್ಥಿತರಿದ್ದರು.

Banner Ad