ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನಲ್ಲಿ ಅತಿಯಾದ ತಾಪಮಾನದಿಂದ ಜನಜೀವನಕ್ಕೆ ಭಾರಿ ಸಂಕಷ್ಟ ಎದುರಾಗಿದೆ. ಬೆಳಿಗ್ಗೆ 11 ಘಂಟೆಯ ನಂತರ ಮನೆಯ ಹೊರಗೆ ಕೆಲಸ ಮಾಡುವುದೇ ಕಷ್ಟ ಕರವಾಗಿದೆ.

ಹಿಂದೆಲ್ಲ ಬೇಸಿಗೆಯಲ್ಲಿ ಇಡೀ ದಿನ ಕೆಲಸ ಮಾಡಿದರೂ ಈ ಪರಿಯ ಸೆಕೆ ಇರಲಿಲ್ಲ. 20 ರಿಂದ 25 ಡಿಗ್ರಿ ತಾಪಮಾನ ಇರುತ್ತಿತ್ತು, ಈಗ ರಾತ್ರಿ ವೇಳೆಯಲ್ಲೂ 25ಡಿಗ್ರಿ ತಾಪಮಾನ ಇರುತ್ತದೆ. ಹಗಲಿನಲ್ಲಿ 35 ರಿಂದ 38 ಡಿಗ್ರಿ ಯ ತಾಪಮಾನ ಇರುತ್ತಿದ್ದು ಇದು ಜನಸಾಮಾನ್ಯರ ದೈನಂದಿನ ಕೆಲಸಕ್ಕೆ ಮತ್ತು ಸಾರ್ವಜನಿಕ ಕೆಲಸ ಕಾರ್ಯ, ಮದುವೆ ಮುಂಜಿ ಮಾಡುವವರಿಗೆ ತುಂಬಾ ತೊಂದರೆ ದಾಯಕವಾಗಿದೆ.

ಬೇಸಿಗೆ ಕಾಲದಲ್ಲಿ ಇದು ಸಾಮಾನ್ಯ ವಾದರೂ ಕಳೆದ ಒಂದು ವಾರದಿಂದ ಮೋಡದ ಜೊತೆಗೆ ಇರುವ ಬಿಸಿಲಿನ ತಾಪಕ್ಕೆ ಗಿಡ ಮರ ಗಳೆಲ್ಲವೂ ಬಾಡಿ ಬಸವಳಿದಿವೆ, ಕೃಷಿಕರ ಬದುಕಿನ ಬುತ್ತಿ ಯಾದ ತೋಟಪಟ್ಟಿಗಳು, ಬಿಸಿಲಿನ ತಾಪಕ್ಕೆ ನಲುಗಿ ಹೋಗುತ್ತಿವೆ, ಅಡಿಕೆ, ತೆಂಗು, ಇನ್ನಿತರೇ ಎಲ್ಲ ಗಿಡಗಳಲ್ಲಿ ಇರುವ ಎಳೆಯ ಕಾಯಿಗಳು, ಒಣಗಿ ಬೀಳುತ್ತೀವೆ, ಸಿಂಗಾರ ಗಳು ಬಿಸಿಲಿನ ಬಿರುಸಿಗೆ ಒಣಗುತ್ತಿವೆ, ನೀರು ಇರುವವರು ನೀರು ಕೊಟ್ಟರೂ ಕಷ್ಟ,ಕೊಡದಿದ್ದರೂ ಕಷ್ಟ ಎಂಬ ಸ್ಥಿತಿಗೆ ಬಂದಿದ್ದಾರೆ.

ಮೇಲಿನ ಬಿಸಿಲಿನ ತಾಪಕ್ಕೆ, ಗಿಡಗಳ ಬುಡಕ್ಕೆ ನೀರು ಬಿದ್ದರೆ ಇರುವ ಮಿಡಿ ಗಳೂ ಬಿದ್ದು ಹೋಗುತ್ತವೆ ಎನ್ನುವ ರೈತರು,ಮಳೆಗಾಗಿ ಆಕಾಶ ನೋಡುತ್ತಾ ದಿಕ್ಕೇ ತೋಚದೆ ಕಂಗೆಟ್ಟಿದ್ದಾರೆ. ದನಕರುಗಳಿಗೆ, ಅಲ್ಲಲ್ಲಿ ಸಿಗುವ ನೀರುಗಳೆಲ್ಲ ಬತ್ತಿಹೋಗಿವೆ, ಕಾಡು ಪ್ರಾಣಿಗಳ ಸ್ಥಿತಿಯಂತೂ ಯಾರಿಗೂ ಬೇಡ, ಕಾಡಲ್ಲಿ ನೀರಿಲ್ಲದ ಕಾರಣ ರೈತರ ತೋಟ ಗಳಿಗೆ ನೀರಿಗಾಗಿ ಬರುತ್ತಿವೆ, ಇದರಿಂದ ರೈತರ ಬದುಕು ಬೆಳೆ ಹಾಳಾಗುತ್ತಿದೆ, ಅರಣ್ಯ ಇಲಾಖೆ ಅರಣ್ಯ ದಲ್ಲಿ ಹತ್ತಾರು ಕಡೆ ನೀರಿನ ಸಂಗ್ರಹಣೆ ಮಾಡಿ ಕೊಟ್ಟರೆ ಪ್ರಾಣಿಗಳ ಬದುಕು ಹಸನಾಗಬಹುದು, ನೀರು ಇರುವ ಕಡೆ ಪ್ರವಾಸಿಗರು, ಬಂದು ಹೋಗುತ್ತಿರುವ ಕಾರಣ ಕಾಡು ಪ್ರಾಣಿಗಳು ನೀರಿನ ಬರ ಎದುರಿಸ ಬೇಕಾಗಿದೆ, ಅಲ್ಲಲ್ಲಿ ಮಳೆ ಬೀಳುತ್ತಿದ್ದರೂ ತಾಲೂಕಿನಲ್ಲಿ ಮಳೆ ಇಲ್ಲದೇ ಜನಜೀವನಕ್ಕೆ ತೊಂದರೆ ಆಗಿದೆ.ಇಡೀ ಜಿಲ್ಲೆಯಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.