ಸುದ್ದಿ ಕನ್ನಡ ವಾರ್ತೆ
ಕಾರವಾರ: ಕರ್ನಾಟಕದಾದ್ಯಂತ
ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಮುಂದಿನ ಐದು ದಿನಗಳ ಕಾಲ ರಾಜ್ಯದ ಹಲವೆಡೆ ಗುಡುಗು ಸಹಿತ ಬಿರುಗಾಳಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮೇ 6 ರಿಂದ ಮೇ 10ರ ವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಹವಾಮಾನದಲ್ಲಿ ಭಾರೀ ಏರುಪೇರಾಗುವ ಸಾಧ್ಯತೆಯಿದೆ.

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮೇ 6 ರಿಂದ 10 ರವರೆಗೆ ಕರ್ನಾಟಕದ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಈ ಸಂದರ್ಭದಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಇದರಿಂದಾಗಿ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳುವ ಅಪಾಯವಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಇದೇ ಅವಧಿಯಲ್ಲಿ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿಯೂ ಮಳೆ ಮುಂದುವರಿಯಲಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.

ಗುಡುಗು ಮತ್ತು ಮಿಂಚಿನ ಸಂದರ್ಭದಲ್ಲಿ ಜನರು ತೆರೆದ ಪ್ರದೇಶಗಳಲ್ಲಿ ಇರಬಾರದು ಹಾಗೂ ಮರಗಳ ಕೆಳಗೆ ಆಶ್ರಯ ಪಡೆಯಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕಾಲಿಕ ಮಳೆಯಿಂದಾಗಿ ರೈತರು ತಮ್ಮ ಬೆಳೆಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಸಂಚಾರದ ವೇಳೆ ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ.