Banner Ad

ಸುದ್ದಿ ಕನ್ನಡ ವಾರ್ತೆ
ಕಾರವಾರ: ಜಿಲ್ಲೆಯ ಪ್ರಸಿದ್ಧ ಬಂಡಿಹಬ್ಬಗಳಲ್ಲಿ ಒಂದಾದ ತಾಲೂಕಿನ ಶಿರವಾಡ ಗ್ರಾಮದ ಬಂಡಿಹಬ್ಬವು ಮೇ 9 ಹಾಗೂ 10 ರಂದು ಅದ್ಧೂರಿಯಾಗಿ ನಡೆಯಲಿದೆ.
ಒಟ್ಟು 5 ದಿನಗಳವರೆಗೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುವ ಈ ಉತ್ಸವದಲ್ಲಿ ಮೇ 6 ರಂದು ಕಳಸ ಮಹಾಮಾಯಿ ದೇವರ ದೇವಸ್ಥಾನದಿಂದ ಕಳಸವು ಗುಂದೇವಾಡಾದ ಮಾಸ್ತಿ ದೇವಸ್ಥಾನ, ಆಡುಕಟ್ಟೆಗೆ ತೆರಳಿ ಅಲ್ಲಿ ಪೂಜೆ ನಡೆದ ಬಳಿಕ ನೇಗಿಲ ಮೂಲಕ ಗದ್ದೆ ಉಳುವ ಹಾಗೂ ಭತ್ತ ಬಿತ್ತುವ ಕಾರ್ಯ ನಡೆಯಲಿದೆ.

ಮೇ 7 ರಂದು ಶ್ರೀ ದೇವರ ಕಳಸವು ಸಿದ್ದಾಪುರ ಗ್ರಾಮದ ಶ್ರೀ ದೇವತಿ ದೇವಿ ದೇವಸ್ಥಾನಕ್ಕೆ ತೆರಳಲಿದ್ದು ಅಲ್ಲಿ ಪೂಜೆ ನಡೆಯಲಿದೆ. ಬಳಿಕ ಅಲ್ಲಿಂದ ಆಡುಕಟ್ಟೆಗೆ ಆಗಮಿಸಿ ಪೂಜೆ ಸಲ್ಲಿಸಿ ಗದ್ದೆಯಲ್ಲಿ ಹಕ್ಕಿ ಓಡಿಸುವ ಕಾರ್ಯ ನಡೆಯಲಿದೆ. ಮೂರನೇ ದಿನ ಮೇ 8 ರಂದು ಶ್ರೀ ದೇವರ ಕಳಸವು ಶೇಜವಾಡದ ಶ್ರೀ ಶೆಜೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಮರಳಿ ಕಳಸ ದೇವಸ್ಥಾನಕ್ಕೆ ಆಗಮಿಸಲಿದೆ.

Banner Ad

ಬಳಿಕ ಅಲ್ಲಿಂದ ದೇವತೆ ವಾಡಾದ ಬಳಿಯ ಶ್ರೀ ಹೆದ್ದೇವರ ಸನ್ನಿಧಿಗೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿ ಕಳಸ ದೇವಸ್ಥಾನಕ್ಕೆ ಮರಳಲಿದೆ. ಅಲ್ಲಿಂದ ರಾತ್ರಿಯ ವೇಳೆ ಆಡುಕಟ್ಟೆಯ ಬಳಿ ಕಳಸವು ತೆರಳಿ ಪೂಜೆ ಸಲ್ಲಿಸಿದ ಬಳಿಕ ಅಲ್ಲಿಂದ ಪೂಜೆ ಸಲ್ಲಿಸಿದ ಬಳಿಕ ಧಾರ್ಮಿಕ ಕಾರ್ಯಗಳು ನಡೆದು ಅಲ್ಲಿಂದ ಶ್ರೀ ದೇವತಿ ದೇವಸ್ಥಾನಕ್ಕೆ ಆಗಮಿಸಿ ಅಲ್ಲಿ ಜಾಗರಣೆ ನಡೆಯಲಿದೆ.

ಮೇ 9 ರಂದು ಬಂಡಿಹಬ್ಬದ ದಿನವಾಗಿದ್ದು ಶ್ರೀ ದೇವತಿ ದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಗಿಂಡಿ ತುಂಬುವುದು, ಉಡಿ ಸೇವೆ ನಡೆಯಲಿದೆ. ಸಂಜೆ 5 ಗಂಟೆಗೆ ಅಲ್ಲಿಂದ ಶ್ರೀ ದೇವರ ಕಳಸವು ಶ್ರೀ ಗ್ರಾಮ ದೇವಸ್ಥಾನಕ್ಕೆ ತೆರಳಲಿದ್ದು ಅಲ್ಲಿ ಪೂಜೆಯ ಬಳಿಕ ಭಕ್ತರಿಂದ ತುಲಾಭಾರ ಸೇರಿದಂತೆ ವಿವಿಧ ಸೇವೆಗಳು ನಡೆಯಲಿವೆ. ರಾತ್ರಿ 8.30ರ ಸುಮಾರಿಗೆ ಶ್ರೀ ದೇವರ ಕಳಸವು ಬಂಡಿಯೊಂದಿಗೆ ಹೊರಟು ಶ್ರೀ ದೇವತಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿ ಮರಳಿ ಕಳಸ ದೇವಸ್ಥಾನಕ್ಕೆ ಆಗಮಿಸಲಿದೆ.
ಮೇ 10 ರಂದು ಕಿರು ಬಂಡಿಹಬ್ಬ ನಡೆಯಲಿದ್ದು ಮಧ್ಯಾಹ್ನ 3.30ಕ್ಕೆ ಕಳಸ ದೇವಸ್ಥಾನದಿಂದ ದೇವತಿ ದೇವಿ ದೇವಸ್ಥಾನಕ್ಕೆಶ್ರೀ ದೇವರ ಕಳಸವು ತೆರಳಿ ಅಲ್ಲಿ ಭಕ್ತರಿಂದ ಉಡಿ ಸೇವೆ ನಡೆಯಲಿದೆ. ಅಲ್ಲಿಂದ ಶ್ರೀ ದೇವರ ಕಳಸವು ಸಂಜೆ 5.30ಕ್ಕೆ ಗ್ರಾಮದೇವಸ್ಥಾನಕ್ಕೆ ತೆರಳಲಿದ್ದು ಅಲ್ಲಿ ಪೂಜೆಯ ಬಳಿಕ ಭಕ್ತರಿಂದ ಹರಕೆ ಒಪ್ಪಿಸುವ ಕಾರ್ಯ ನಡೆಯಲಿದೆ. ಬಳಿಕ ಶ್ರೀ ದೇವರ ಕಳಸವು ಕಳಸ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುವ ಮೂಲಕ ಬಂಡಿಹಬ್ಬ ಸಂಪನ್ನಗೊಳ್ಳಲಿದೆ.

ಭಕ್ತರು ಈ ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬಂಡಿಹಬ್ಬದ ದೇವಸ್ಥಾನಗಳ ಮಂಡಳಿ ವತಿಯಿಂದ ಕೋರಲಾಗಿದೆ.

Banner Ad