ಸುದ್ದಿ ಕನ್ನಡ ವಾರ್ತೆ
ಉತ್ತರ ಕನ್ನಡ ಜಿಲ್ಲೆಯ ಸಜ್ಜನ ರಾಜಕಾರಣಿ, ಹಿರಿಯ ಸಮಾಜ ಸೇವಕರು ಹಾಗೂ ಜನನಾಯಕರು ಆಗಿದ್ದ ರಮಾನಂದ ಬಿ.ನಾಯಕ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು.ಎಂದು ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರು, ಶಾಸಕರು ಆದ ಆರ್ ವಿ ದೇಶಪಾಂಡೆ ಕಂಬನಿ ಮಿಡಿದಿದ್ದಾರೆ.
ರಮಾನಂದ ನಾಯಕ ಅವರು ಕಳೆದ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡು, ಸಾಮಾಜಿಕ,ಶೈಕ್ಷಣಿಕ, ಸಾಹಿತ್ಯಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದರು. ಹಿಚಕಡ ಸೇವಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಹಾಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು. ನಮ್ಮ ರಾಜ್ಯದಲ್ಲಿ ಜಿಲ್ಲಾ ಪರಿಷತ್ ವ್ಯವಸ್ಥೆ ಆರಂಭವಾದ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಪರಿಷತ್ತಿನ ಪ್ರಥಮ ಅಧ್ಯಕ್ಷರಾಗಿ ಐದು ವರ್ಷಗಳ ಕಾಲ ಪ್ರಾಮಾಣಿಕ, ಪಾರದರ್ಶಕ ಹಾಗೂ ಜನರ ಮನಸ್ಸಿನಲ್ಲಿ ನೆನೆಪಿನಲ್ಲಿ ಉಳಿಯುವಂತಹ ಆಡಳಿತ ನೀಡಿದ ಕೀರ್ತಿ ಅವರದ್ದು, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡು, ಜಿಲ್ಲೆಯಾದ್ಯಂತ ಅನೇಕ ಸಭೆಗಳು,ಸಮ್ಮೇಳನಗಳು ಹಾಗೂ ಕಾರ್ಯಕರ್ತರ ಸಮಾವೇಶಗಳನ್ನು ಯಶಸ್ವಿಯಾಗಿ ಆಯೋಜಿಸಿ ಪಕ್ಷವನ್ನು ಗ್ರಾಮ ಮಟ್ಟದಲ್ಲಿ ಬಲಪಡಿಸಲು ಶ್ರಮಿಸಿದ್ದರು.
ಸ್ವ-ಪರಿಶ್ರಮ,ಸರಳತೆ, ಸಕಾರಾತ್ಮಕ ಚಿಂತನೆ ಹಾಗೂ ಜನಪರ ಕಾಳಜಿಯ ಮೂಲಕ ಸಮಾಜದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದ ಅವರು,ಯುವ ಜನಾಂಗಕ್ಕೆ ಸದಾ ಮಾದರಿಯಾಗುವ ವ್ಯಕ್ತಿತ್ವದವರಾಗಿದ್ದರು. ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಆತ್ಮೀಯತೆ ಬೆಳೆಸಿ,ಅಗತ್ಯವಿರುವವರಿಗೆ ನೆರವಾಗುವ ವಿಶಾಲ ಹೃದಯ ಹೊಂದಿದ ವ್ಯಕ್ತಿಯಾಗಿದ್ದರು.ನನ್ನ ರಾಜಕೀಯ ಜೀವನದ ಒಡನಾಡಿಯಾಗಿ ಅವರೊಂದಿಗೆ ಕಳೆದ ಅನೇಕ ಸಂದರ್ಭಗಳು ಚಿರಸ್ಮರಣೀಯವಾಗಿವೆ. ರಾಜಕೀಯ,ಸಹಕಾರ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅವರು ತೋರಿದ ಕ್ರಿಯಾಶೀಲತೆ ಮತ್ತು ಸಮರ್ಪಣಾಭಾವ ಸದಾ ಸ್ಮರಣೀಯವಾಗಿರುತ್ತದೆ. ಅವರ ಅಗಲಿಕೆ ಯಿಂದ ತುಂಬಲಾರದ ನಷ್ಟ ಉಂಟಾಗಿದೆ.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬದ ಸದಸ್ಯರು, ಬಂಧುಬಳಗ ಮತ್ತು ಅಭಿಮಾನಿಗಳಿಗೆ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.ಎಂದು
ಆರ್ ವಿ ದೇಶಪಾಂಡೆ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
