ಸುದ್ದಿ ಕನ್ನಡ ವಾರ್ತೆ
ಕಾರವಾರ: ತಾಲೂಕಿನ ಅಮದಳ್ಳಿ ಗ್ರಾಮದಲ್ಲಿರುವ ಶ್ರೀ ಬಾಲವೀರಗಣಪತಿ ಕ್ಷೇತ್ರ ಸಂಸ್ಥಾನದ 42ನೇ ವಾರ್ಷಿಕ ಮಹೋತ್ಸವವು ರವಿವಾರ ಮತ್ತು ಸೋಮವಾರದಂದು ಭಕ್ತಿ, ಸಂಭ್ರಮ ಹಾಗೂ ಶ್ರದ್ಧಾಭಾವದೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಅಕ್ಷಯ ತೃತೀಯದ ಪುಣ್ಯ ಸಂದರ್ಭದಲ್ಲಿ ನಡೆದ ಈ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಕೃಪೆಗೆ ಪಾತ್ರರಾದರು.

ಎಪ್ರಿಲ್ 19 ರಂದು ನಡೆದ ಸಾಮೂಹಿಕ ಸತ್ಯಗಣಪತಿ ವ್ರತದಲ್ಲಿ ಅನೇಕ ಭಕ್ತರು ಪಾಲ್ಗೊಂಡು ಪೂಜೆ ಸಲ್ಲಿಸಿದರು.
ಅಕ್ಷಯ ತೃತೀಯದಂದು(ಎ.20) ಮುಂಜಾನೆ 5:30ರಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭಗೊಂಡವು. ಗಣಹೋಮ, ಪೂರ್ಣಾಹುತಿ,
ಅಭಿಷೇಕ, ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳು ಕ್ರಮಬದ್ಧವಾಗಿ ನೆರವೇರಿದವು. ದಿನಪೂರ್ತಿ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೇವರ ಆಶೀರ್ವಾದ ಪಡೆದರು. ಸಂಜೆ ನಡೆದ ರಂಗಪೂಜೆ ಹಾಗೂ ದೀಪೋತ್ಸವವು ವಿಶೇಷ ಆಕರ್ಷಣೆಯಾಗಿ ಪರಿಣಮಿಸಿತು.

ಜಾತ್ರೆಯ ಅಂಗವಾಗಿ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ಮಡಗಾಂವ (ಗೋವಾ) ಮೂಲದ ಇಚ್ಛಿತ್ ಗುರುದಾಸ್ ತಳಾವಳಕರ ಅವರು ನಿರಂತರ 20ನೇ ವರ್ಷವೂ ಅನ್ನಸೇವೆಯನ್ನು ಸಮರ್ಪಕವಾಗಿ ನೆರವೇರಿಸಿದರು.

ಈ ಜಾತ್ರಾ ಮಹೋತ್ಸವದ ಯಶಸ್ವಿ ಆಯೋಜನೆಗೆ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಜಿ.ಕೆ. ಶಿವಪ್ರಸಾದ, ಕಾರ್ಯದರ್ಶಿ ವಿ.ಪಿ. ಗಾಂವಕಾರ, ಖಜಾಂಚಿ ಸುಭಾಷ್ ನಾಯ್ಕ ಹಾಗೂ ಸದಸ್ಯರಾದ ಜಿ.ಡಿ. ಗೋವಿಂದಕುಮಾರ, ಮಾರುತಿ ಕೊಳಂಬಕರ್, ನಾರಾಯಣ ಎಂ. ಖಾರ್ವಿ, ದಿವಾಕರ ಅಮದಳ್ಳಿ,ಜೊತೆಗೆ ದೇವಸ್ಥಾನದ ಸಿಬ್ಬಂದಿ ವರ್ಗ,ಸ್ವಯಂಸೇವಕರು, ಗ್ರಾಮಸ್ಥರು ಹಾಗೂ ಅನೇಕ ಸಾರ್ವಜನಿಕರು ಸಹಾಯ ಸಹಕಾರ ನೀಡಿದರು.
ಈ ವರ್ಷದ ಮಹೋತ್ಸವವು ಶಾಂತಿ, ಭಕ್ತಿ ಮತ್ತು ಸೌಹಾರ್ದತೆಯ ಸಂಕೇತವಾಗಿ ಯಶಸ್ವಿಯಾಗಿ ನೆರವೇರಿದ್ದು. ದೇವಸ್ಥಾನದ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರ ಸಮನ್ವಯದಿಂದ ಕಾರ್ಯಕ್ರಮವು ಅಚ್ಚುಕಟ್ಟಾಗಿ ಆಯೋಜನೆಗೊಂಡು ಪ್ರಶಂಸೆಗೆ ಕಾರಣವಾಯಿತು.