ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಆನಗೋಡಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನರ್ನವೀಕರಣ ಹಾಗೂ ಅಷ್ಟಬಂಧ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಬುಧವಾರ ಅತ್ಯಂತ ಶ್ರದ್ಧಾಭಕ್ತಿಯಿಂದ ಚಾಲನೆ ನೀಡಲಾಯಿತು.
ವಿದ್ವಾನ್ ಗಣಪತಿ ಭಟ್ಟ ಹಿರೇ ಗೋಕರ್ಣ ಅವರ ಮಾರ್ಗದರ್ಶನ ಹಾಗೂ ವೇದಮೂರ್ತಿ ಗಣಪತಿ ಭಟ್ಟ ಕೊರಗಿ ಅವರ ಪೌರೋಹಿತ್ಯದಲ್ಲಿ ಮೊದಲ ದಿನದ ಧಾರ್ಮಿಕ ವಿಧಿಗಳು ಜರುಗಿದವು. ಬೆಳಿಗ್ಗೆ ಗಣಪತಿ ಪೂಜೆ, ಮಹಾ ಸಂಕಲ್ಪದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಬ್ರಹ್ಮಕೂರ್ಚ ಹವನ, ನಾಂದಿ-ಪುಣ್ಯಾಹ, ಕೌತುಕಪೂಜೆ, ಋತ್ವಿಗ್ವರಣ ಮತ್ತು ಮಧುಪರ್ಕ ವಿಧಿಗಳನ್ನು ನೆರವೇರಿಸಲಾಯಿತು. ನಂತರ ಕೌತುಕಬಂಧನ, ಅಷ್ಟಮೂರ್ತಿ ಪ್ರಾರ್ಥನೆ, ಬಿಂಬಶುದ್ಧಿ ಹಾಗೂ ಜಲಾಧಿವಾಸ ಗಣಹವನಗಳು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡವು.
ಸಾಯಂಕಾಲ ಯಾಗಶಾಲಾ ಪ್ರವೇಶದೊಂದಿಗೆ ಸಪ್ತಶುದ್ಧಿ, ಪ್ರಸಾದ ಶುದ್ಧಿ, ಮಂಟಪ ಸಂಸ್ಕಾರ ಹಾಗೂ ಮಂಡಲ ದರ್ಶನ ಕಾರ್ಯಕ್ರಮಗಳು ನಡೆದವು. ವಾಸ್ತು ಶಾಂತಿ, ಅಧಿವಾಸನ ಉದಕ ಶಾಂತಿ ಹಾಗೂ ವಾಸ್ತುಬಲಿ ಪ್ರಕ್ರಿಯೆಗಳ ಮೂಲಕ ಕ್ಷೇತ್ರದ ಪವಿತ್ರತೆಯನ್ನು ಹೆಚ್ಚಿಸುವ ಧಾರ್ಮಿಕ ವಿಧಿಗಳನ್ನು ಪೂರೈಸಲಾಯಿತು.
ಚೈತ್ರಕೃಷ್ಣ ಸಪ್ತಮಿ ಗುರುವಾರದಂದು ಎರಡನೇ ದಿನದ ಪೂಜೆಗಳು ಮುಂದುವರಿಯಲಿವೆ. ಬೆಳಿಗ್ಗೆ ಪುಣ್ಯಾಹ, ಕಲಶ ಸ್ಥಾಪನೆ, ಅಗ್ನಿಜನನ, ಅಗ್ನಿಸಂಸ್ಕಾರ ಹಾಗೂ ಸ್ಥಾನ ಶುದ್ಧಿ ಹವನಗಳು ನಡೆಯಲಿವೆ. ಜೊತೆಗೆ ಪೂಜಾಹವನ, ನವಗ್ರಹ ಶಾಂತಿ, ಪ್ರಾಯಶ್ಚಿತ್ತ ಹವನ ಹಾಗೂ ಗಣಪತ್ಯಥರ್ವಶೀರ್ಷ ಹವನಗಳು ಜರುಗಲಿವೆ.
ಸಾಯಂಕಾಲ ಶ್ರೀಸೂಕ್ತ ಮತ್ತು ಪುರುಷಸೂಕ್ತ ಪಾರಾಯಣ, ಶಯ್ಯಾಧಿವಾಸ, ಚಕ್ರಾಬ್ಜ ಮಂಡಲಪೂಜೆ ಹಾಗೂ ಪ್ರತಿಷ್ಠಾಪೂರ್ವಾಂಗ ಹವನಗಳು ನಡೆಯಲಿವೆ. ಕೊನೆಯಲ್ಲಿ ಅಷ್ಟಾವಧಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಗಳು ಇರಲಿವೆ. ನಾಲ್ಕು ದಿನಗಳ ಈ ವೈಭವದ ಮಹೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು ಹಾಗೂ ಪ್ರಸಾದ ಸ್ವೀಕರಿಸಬೇಕು ಎಂದು ಸಂಘಟಕರು ವಿನಂತಿಸಿದ್ದಾರೆ.
