ಸುದ್ದಿ ಕನ್ನಡ ವಾರ್ತೆ
ಜೊಯಿಡಾ: ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಾಂಗೋಡಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಇರಂಗೋಳ-ಮಾಲಾಗಿಣ್ಣಿ ಗ್ರಾಮದ ಯೋಧ ಈಶ್ವರ ವಸಂತ ನಾಯ್ಕ ಅವರ ಪಾರ್ಥಿವ ಶರೀರ ಇಂದು ಬೆಳಿಗ್ಗೆ ಜೋಯಿಡಾಕ್ಕೆ ಆಗಮಿಸಿತು.
ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಜೋಯಿಡಾ ಶಿವಾಜಿ ವೃತ್ತದಲ್ಲಿ ಸಾರ್ವಜನಿಕರು, ಮಾಜಿ ಸೈನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಭಾವಪೂರ್ಣ ಅಂತಿಮ ನಮನ ಸಲ್ಲಿಸಿದರು. ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧನಿಗೆ ಗೌರವ ಸೂಚಿಸಿ ಪುಷ್ಪನಮನ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬಳಿಕ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮ ಇರಂಗೋಳ-ಮಾಲಾಗಿಂಣಿಗೆ ಕೊಂಡೊಯ್ಯಲಾಯಿತು. ಅಲ್ಲಿ ಕುಟುಂಬ ಸದಸ್ಯರು, ಬಂಧು-ಬಳಗ, ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಂತೋಷ ಸಾವಂತ, ದೇಶಸೇವೆಯಲ್ಲಿ ತೊಡಗಿದ್ದ ಯೋಧ ಈಶ್ವರ ವಸಂತ ನಾಯ್ಕ ಅವರ ಸೇವೆಯನ್ನು ಸ್ಮರಿಸಿ, ಅವರ ಅಕಾಲಿಕ ನಿಧನವು ತಾಲೂಕಿನಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಯೋಧನ ಅಗಲಿಕೆಯಿಂದ ಜೋಯಿಡಾ ತಾಲೂಕಿನಾದ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
