ಸುದ್ದಿ ಕನ್ನಡ ವಾರ್ತೆ
ರಸ್ತೆಗಾಗಿ ವಿದ್ಯಾರ್ಥಿಯ ಕಣ್ಣೀರ ಮನವಿ: ‘ನಮ್ಮ ಕಷ್ಟವನ್ನಾದರೂ ಅರ್ಥ ಮಾಡಿಕೊಳ್ಳಿ’
ಧಾರವಾಡದ ಹಾರೋಬೆಳವಡಿ ಗ್ರಾಮದ ರಸ್ತೆ ದುಸ್ಥಿತಿಯಿಂದ ಶಾಲೆಗೆ ತೆರಳಲು ವಿದ್ಯಾರ್ಥಿ ಗಳು ಎದುರಿಸುತ್ತಿರುವ ಸಂಕಷ್ಟ ಇದೀಗ ರೀಲ್ಸ್ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನಕ್ಕೆ ಕಾರಣವಾಗಿದೆ.
ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದಿಂದ ಆಯಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಮಾತ್ರವಲ್ಲದೆ, ಜನರು ನಡೆದುಕೊಂಡು ಹೋಗಲೂ ಪರದಾಡುವಂತಾಗಿದೆ. ರಸ್ತೆ ತುಂಬೆಲ್ಲಾ ಗುಂಡಿಗಳು, ಕೆಸರು ಹಾಗೂ ಹಾಳಾದ ರಸ್ತೆಯೇ ಕಾಣಸಿಗುತ್ತಿದ್ದು, ಗ್ರಾಮಸ್ಥರ ದಿನನಿತ್ಯದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಈ ಸಮಸ್ಯೆಯಿಂದ ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿದಿನ ಶಾಲೆಗೆ ತೆರಳುವ ಹಾಗೂ ಮನೆಗೆ ಮರಳುವ ವೇಳೆ ಹದಗೆಟ್ಟ ರಸ್ತೆಯಿಂದಾಗಿ ಅಪಾಯ ಎದುರಿಸುವಂತಾಗಿದೆ.
ಈ ಕುರಿತು ಓರ್ವ ವಿದ್ಯಾರ್ಥಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕ ತನ್ನ ಅಳಲು ತೋಡಿಕೊಂಡಿದ್ದು, “ದಯವಿಟ್ಟು ನಮ್ಮ ಕಷ್ಟವನ್ನಾದರೂ ಅರ್ಥ ಮಾಡಿಕೊಳ್ಳಿ” ಎಂದು ಕೈಮುಗಿದು ಸರ್ಕಾರಕ್ಕೆ ಮನವಿ ಮಾಡಿರುವ ದೃಶ್ಯ ಮನಕಲಕುವಂತಿದೆ.
ರಸ್ತೆ ದುರಸ್ತಿಯಾಗದೆ ಇರುವುದರಿಂದ ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ತುರ್ತು ಸಂದರ್ಭದಲ್ಲಿ ವಾಹನಗಳು ಸಂಚರಿಸುವುದಕ್ಕೂ ಸಮಸ್ಯೆಯಾಗುತ್ತಿದೆ. ಹಲವು ವರ್ಷಗಳಿಂದ ರಸ್ತೆ ದುರಸ್ತಿಗಾಗಿ ಮನವಿ ಮಾಡುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂಬುದು ಗ್ರಾಮಸ್ಥರ ಅಳಲು.
ಮಕ್ಕಳು ಶಾಲೆಗೆ ಸುರಕ್ಷಿತವಾಗಿ ತೆರಳಲು ಉತ್ತಮ ರಸ್ತೆ ಬೇಕು. ಗ್ರಾಮಸ್ಥರ ಸಂಚಾರಕ್ಕೆ ಮೂಲಭೂತ ಸೌಕರ್ಯ ಬೇಕು. ಹೀಗಾಗಿ ಹಾರೋಬೆಳವಡಿ ಗ್ರಾಮದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ರಸ್ತೆ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದಿದ್ದಾರೆ. … .
ಆದರೆ ಇದು ಎಲ್ಲ ಜಿಲ್ಲೆಗಳ ಎಲ್ಲ ಹಳ್ಳಿಗರ ಪರಿಸ್ಥಿತಿಗೆ ಕನ್ನಡಿ ಹಿಡಿದಂತೆ ಆಗಿದೆ. ಕೆಲಸ ಮಾಡದ ಶಾಸಕರು, ಅವರ ಬೆನ್ನ ಹಿಂದೆ ಇರುವ ಅವರ ಹಿoಬಾಲಕರ ಅಸಡ್ಡೆ ಗಳೇ ಹಳ್ಳಿಗಳು ದುಸ್ಥಿತಿಗೆ ತಲುಪಲು ಕಾರಣ ವಾಗಿದೆ, ಕೋಟ್ಯಾoತರ ಹಣ ಖರ್ಚು ಮಾಡಿ ಆಯ್ಕೆ ಆಗುವ ಶಾಸಕರ ಹಿಂದೆ ಅವರನ್ನು ಗೆಲ್ಲಿಸುವ ಮತದಾರರೂ ಭ್ರಷ್ಟಾಚಾರಕ್ಕೆ ಇಳಿದ ಕಾರಣ, ಹಳ್ಳಿಗಳಾಗಲಿ, ಊರು ಕೇರಿ ಗಳಾಗಲಿ ಸುಧಾರಣೆ ಕಂಡಿಲ್ಲ. ಇದು ಮುಂದಿನ ಭವಿಷ್ಯದ ಕೊಂಡಿಗಳಾಗ ಬೇಕಾದ ಮಕ್ಕಳು ಅನುಭವಿಸುವಂತಾಗಿದೆ
