ಸುದ್ದಿ ಕನ್ನಡ ವಾರ್ತೆ
ಶಿರಸಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಾಕಿದ ಹಳಿಯ ಮೇಲೆ ಶಾಸಕ ಭೀಮಣ್ಣ ನಾಯ್ಕ ಅವರು ರೈಲು ಬಿಡುತ್ತಿದ್ದಾರೆ. ಕಟ್ಟಡ, ಕಾಮಗಾರಿಗಳ ರಿಬ್ಬನ್ ಕತ್ತರಿಸುತ್ತಿದ್ದಾರೆ. ಇವರ ಸ್ವಂತ ಕಾಮಗಾರಿ ಯಾವುದಿದೆ ಹೇಳಲಿ ಎಂದು ಬಿಜೆಪಿ ವಕ್ತಾರ ಸದಾನಂದ ಭಟ್ಟ ನಿಡಗೋಡ ಪ್ರತಿ ದಾಳಿ ನಡೆಸಿದರು.
ಶುಕ್ರವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿಯ ಯಶಸ್ಸು ಸಹಿಸಲಾಗದ ಕಾಂಗ್ರೆಸ್ ಹತಾಶ ಭಾವನೆಗೆ ಇಳಿದಿದೆ. ಯಾರನ್ನೋ ಮೆಚ್ಚಿಸಲು ಕೆಪಿಸಿಸಿ ವಕ್ತಾರರು ಬಿಜೆಪಿ ಮೇಲೆ ವಿನಾಕಾರಣ ಆರೋಪಿಸುವ ಟೂಲ್ ಕಿಟ್ ಮಾಡಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ಪ್ರಮುಖರಿಗೆ ಪ್ರಚಾರದ ಗೀಳು ಅಂಟಿಸಿಕೊಂಡಿದ್ದಾರೆ. ಕಾರವಾರದಲ್ಲಿ, ಶಿರಸಿಯಲ್ಲಿ ಯಾರದ್ದೋ ಒತ್ತಡಕ್ಕೆ ಒಳಗಾಗಿ, ಉತ್ತರ ಹೇಳಬೇಕಾದವರು ಮುಂದೆ ಬಾರದೇ ಇವರ ಮೂಲಕ ಹೇಳಿಸಿದ್ದಾರೆ. ಮಾಹಿತಿ ಇಲ್ಲದೇ ಸುದ್ದಿಗೋಷ್ಟಿ ನಡೆಸಿದರೆ ಏನಾಗುತ್ತದೆ ಎಂಬುದಕ್ಕೆ ಇದೇ ಉದಾಹರಣೆ ಎಂದೂ ಹೇಳಿದರು.
ಹೇಳಿಕೆ ಕೊಡಲಷ್ಟೇ ಜನಪ್ರತಿನಿಧಿಗಳ ಜವಬ್ದಾರಿಯಲ್ಲ. ಜನರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಆಗಬೇಕು. ಅದಕ್ಕೆ ಸಂಸದ ಕಾಗೇರಿ ಜನರಿಗೆ ಅತ್ಯಂತ ಹತ್ತಿರದಿಂದ ಸ್ಪಂದಿಸುತ್ತಿದ್ದಾರೆ. ಜನರ ಕಷ್ಟಕ್ಕೆ ಕೇಂದ್ರದಿಂದ ಆಗಬೇಕದ್ದು ಮಾಡುತ್ತಿದ್ದಾರೆ. ಇದನ್ನೆಲ್ಲ ಕಾಂಗ್ರೆಸ್ ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸೀಬರ್ಡದಿಂದ ರೈಲ್ವೆ ತನಕ ಸರಕಾರದಿಂದ ಸಿಗಬೇಕಾದ ಯಶಸ್ಸು ಸಿಗುತ್ತಿದೆ. ಇದನ್ನು ಸಹಿಸಲು ಆಗುತ್ತಿಲ್ಲ ಎಂದರು.
ಹವಾಮಾನ ಬೆಳೆ ವಿಮೆ ಕೊಡಿಸಲು ಕಾಗೇರಿ ಅವರು ಶ್ರಮಿಸುತ್ತಿದ್ದಾರೆ. ರಾಜ್ಯ ಸರಕಾರ ತಾನೇನು ಮಾಡುವದಿಲ್ಲ. ಎಲ್ಲ ಕೇಂದ್ರ, ಕಾಗೇರಿ ಅವರೇ ಮಾಡಬೇಕು ಎಂದರೆ ಏನರ್ಥ? ಎಂದ ಅವರು, ಜನರಿಗೆ ಸಮಸ್ಯೆ ಮಾಡುವದೇ ರಾಜ್ಯ ಕಾಂಗ್ರೆಸ್ ಸರಕಾರದ ಕಾರ್ಯ. ಗ್ರಾ.ಪಂ.ಗಳಲ್ಲಿ ಮಳೆ ಮಾಪನ ಕೇಂದ್ರವೇ ಸರಿ ಇರದಂತೆ ನೋಡಿಕೊಂಡಿದ್ದು ಹೇಗೆ ಎಂದು ಕೇಳಬೇಕಾಗುತ್ತದೆ ಎಂದರು.
ವಕ್ಪ ಕಾಯಿದೆ ತಿದ್ದುಪಡಿ ಆಗಿದೆ. ಧರ್ಮದ ಅಡಿಯಲ್ಲಿ ನಡೆಯದೇ ಸಂವಿಧಾನದ ಅಡಿಯಲ್ಲಿ ನಡೆಯಬೇಕು. ಕಾಂಗ್ರೆಸ್ ತುಷ್ಟೀಕರಣಕ್ಕೆ ಕಡಿವಾಣ ಹಾಕಿದಂತಾಗಿದೆ. ಜನರ ಭೂಮಿ ಕಬಳಿಸುವಲ್ಲಿ ಇತಿಶ್ರೀ ಹಾಡಲಾಗಿದೆ. ಲೋಕಸಭೆ, ರಾಜ್ಯ ಸಭೆಯಲ್ಲಿ ಅತಿ ಹೆಚ್ಚು ಬೆಂಬಲಿಸಿದ ಎಲ್ಲ ಸಂಸದರನ್ನು ಅಭಿನಂದಿಸುವದಾಗಿ ಹೇಳಿದರು.
ಪ್ರಮುಖರಾದ ಆರ್.ಡಿ.ಹೆಗಡೆ ಜಾನ್ಮನೆ, ಆನಂದ ಸಾಲೇರ, ಉಷಾ ಹೆಗಡೆ, ನಂದನ್ ಸಾಗರ, ಮಂಜುನಾಥ ಭಂಡಾರಿ, ಶರ್ಮಿಳಾ ಮಾದನಗೇರಿ, ರಮಾಕಾಂತ ಭಟ್, ನಾಗರಾಜ ನಾಯ್ಕ ಇದ್ದರು.