Banner Ad

ಸುದ್ದಿ ಕನ್ನಡ ವಾರ್ತೆ

ಹುಬ್ಬಳ್ಳಿ: ನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025-26ನೇ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದ ವೇಳೆ ಕ್ರೀಡಾಸ್ಫೂರ್ತಿಗೆ ಧಕ್ಕೆಯುಂಟುಮಾಡುವ ಘಟನೆಯೊಂದು ನಡೆದಿದೆ. ಪಂದ್ಯದ ಎರಡನೇ ದಿನದಾಟದ ವೇಳೆ ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರ ತಂಡದ ಆಟಗಾರರ ನಡುವೆ ಮೈದಾನದಲ್ಲಿಯೇ ತೀವ್ರ ವಾಗ್ವಾದ ನಡೆದಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದ ಪರಿಸ್ಥಿತಿಯನ್ನು ಅಂಪೈರ್‌ಗಳು ಶಮನಗೊಳಿಸಿದ್ದಾರೆ.

Banner Ad

ಜಮ್ಮು ಮತ್ತು ಕಾಶ್ಮೀರ ತಂಡದ ಇನಿಂಗ್ಸ್‌ನ 100ನೇ ಓವರ್‌ನಲ್ಲಿ ಈ ಹೈಡ್ರಾಮಾ ನಡೆದಿದೆ. ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಅವರ ಎಸೆತವನ್ನು ಜಮ್ಮು-ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಗಲ್ಲಿಯತ್ತ ಬಾರಿಸಿದರು. ಅಲ್ಲಿಯೇ ಇದ್ದ ಫೀಲ್ಡ‌ರ್ ಡೈವ್ ಮಾಡಿ ಚೆಂಡನ್ನು ತಡೆಯಲ ಯತ್ನಿಸಿದರಾದರೂ, ಚೆಂಡು ಬೌಂಡರಿ ಗೆರೆ ದಾಟಿತು. ಈ ಬೆನ್ನಲ್ಲೇ ಸಿಲ್ಲಿ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕರ್ನಾಟಕದ ಬದಲಿ ಆಟಗಾರ ಕೆ.ವಿ. ಅನೀಶ್ ಹಾಗೂಪರಾಸ್ ಡೋಗ್ರಾ ನಡುವೆ ಮಾತಿನ ಚಕಮಕಿ ಶುರುವಾಯಿತು. ಆಟಗಾರರ ನಡುವಿನ ವಾಗ್ವಾದ ಕ್ಷಣಾರ್ಧದಲ್ಲಿಯೇ ವಿಕೋಪಕ್ಕೆ ತಿರುಗಿದ್ದು, ಜಮ್ಮು ಕಾಶ್ಮೀರದ ನಾಯಕ ಪರಾಸ್ ಡೋಗ್ರಾ ಅವರು ಏಕಾಏಕಿ ಅನೀಶ್ ಅವರ ತಲೆಗೆ ಡಿಚ್ಚಿ ಹೊಡೆದಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಕರ್ನಾಟಕ ತಂಡದ ಮಾಜಿ ನಾಯಕ ಮಯಾಂಕ್ ಅಗರ್ವಾಲ್ ಕೂಡಲೇ ಸ್ಥಳಕ್ಕೆ ಧಾವಿಸಿ ಡೋಗ್ರಾ ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದರು. ಕೆಲಕಾಲ ಮೈದಾನದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಅಂಪೈರ್‌ಗಳು ಮಧ್ಯಪ್ರವೇಶಿಸಿ ಆಟಗಾರರನ್ನು ಬೇರ್ಪಡಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಬೃಹತ್ ಮೊತ್ತದತ್ತ ಜಮ್ಮು- ಕಾಶ್ಮೀರ ತಂಡವು ದಾಪುಗಾಲನ್ನಿಟ್ಟಿದ್ದು,
ರಣಜಿ ಫೈನಲ್‌ನ ಎರಡನೇ ದಿನದಾಟ ಮುಂದುವರಿಸಿರುವ ಜಮ್ಮು ಕಾಶ್ಮೀರ ದಿನಾದಾಂತ್ಯಕ್ಕೆ 156 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 527 ರನ್ ಪೇರಿಸಿದೆ. ಶುಭಂ ಪುಂಡಿರ್(121) ಶತಕ ಬಾರಿಸಿದರೆ, ನಾಯಕ ಪಾರಸ್ ಡೋಗ್ರಾ(70), ಕನ್ನಯ್ಯ ವಾಧವನ್(70), ಅಬ್ದುಲ್ ಸಮದ್(61), ಸಾಹಿಲ್ ಲೋತ್ರಾ( ಅರ್ಧ ಶತಕ ಗಳಿಸಿ ತಂಡ 500 ರನ್ ದಾಟಲು ನೆರವಾಗಿದ್ದಾರೆ. ಕರ್ನಾಟಕ ಪರ ಪ್ರಸಿದ್ಧ ಕೃಷ್ಣ 90/3, ವಿದ್ಯಾದರ್, ಶ್ರೇಯಸ್‌ ಹಾಗೂ ಶ್ರೀಕ‌ರ್ ಶೆಟ್ಟಿ ತಲಾ ಒಂದೊಂದು ವಿಕೆಟ್ ಕಬಳಿಸಿದ್ದಾರೆ.

Banner Ad