ಸುದ್ದಿ ಕನ್ನಡ ವಾರ್ತೆ

ಚಿಕ್ಕಮಗಳೂರು: ಭಾರತದ 28 ರಾಜ್ಯಗಳು ಹಾಗೂ 806 ಜಿಲ್ಲೆಗಳನ್ನು ಕಾಲ್ನಡಿಗೆಯಲ್ಲೇ ಸುತ್ತುವ ಮಹತ್ವಾಕಾಂಕ್ಷೆಯ ಸಂಕಲ್ಪದೊಂದಿಗೆ ಆಕಾಶ್ ಶುಕ್ಲಾ ಎಂಬ ಯುವಕ ಸಂಪೂರ್ಣ ಭಾರತ ಪಾದಯಾತ್ರೆ ಕೈಗೊಂಡಿದ್ದಾರೆ.

 

ಒಟ್ಟು 70,000 ಕಿಲೋಮೀಟರ್ ದೂರವನ್ನು ಕ್ರಮಿಸುವ ಗುರಿ ಹೊಂದಿರುವ ಇವರು, ಆರು ವರ್ಷಗಳ ಸುದೀರ್ಘ ಯೋಜನೆಯೊಂದಿಗೆ ಈ ಸಾಹಸಯಾತ್ರೆಯನ್ನು ಆರಂಭಿಸಿದ್ದಾರೆ. ಈಗಾಗಲೇ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಪಾದಯಾತ್ರೆ ನಡೆಸುತ್ತಿರುವ ಆಕಾಶ್, ನಾಲ್ಕು ರಾಜ್ಯಗಳನ್ನು ಪೂರ್ಣಗೊಳಿಸಿ ಸುಮಾರು 8,000 ಕಿಲೋಮೀಟರ್ ದೂರವನ್ನು ಯಶಸ್ವಿಯಾಗಿ ಕ್ರಮಿಸಿದ್ದಾರೆ.

 

ಪ್ರಸ್ತುತ ಕರ್ನಾಟಕವನ್ನು ತಲುಪಿರುವ ಅವರು ಶೃಂಗೇರಿ ಹಾಗೂ ಕುಂಚಿಕಲ್ ಜಲಪಾತದತ್ತ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್‌ ಕಡೆಗೆ ತಮ್ಮ ಪಯಣ ಮುಂದುವರಿಸಲಿದ್ದಾರೆ. ಇನ್ನೂ 62,000 ಕಿಲೋಮೀಟರ್‌ಗಳಷ್ಟು ಬೃಹತ್ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸುವ ಅಚಲ ಸಂಕಲ್ಪ ಅವರದ್ದಾಗಿದೆ.