ಸುದ್ದಿ ಕನ್ನಡ ವಾರ್ತೆ

. ಗುಜರಾತ:ರಾಜ್ಯದ ಏಕತಾ ನಗರದಲ್ಲಿ( ಕೆವಾಡಿಯಾ) ಮಂಗಳವಾರ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ ದಾದಾಸಾಹೇಬ್ ಫಾಲ್ಕೆ (Dadasaheb Phalke) ಪ್ರಶಸ್ತಿಯನ್ನು ಭಾರತದ ರಾಷ್ಟ್ರಪತಿಯಾದ ದ್ರೌಪದಿ ಮುರ್ಮು ಪ್ರಧಾನ ಮಾಡಿದರು.

 

ಭಾರತೀಯ ಚಿತ್ರರಂಗಕ್ಕೆ ಐದು ದಶಕಗಳಿಗೂ ಹೆಚ್ಚು ಕಾಲ ನೀಡಿದ ಕೊಡುಗೆಯನ್ನು ಪರಿಗಣಿಸಿ ಅನಂತ್ ನಾಗ್ ಅವರನ್ನು 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಕೇಂದ್ರ ಸರ್ಕಾರದ ಪ್ರಕಟಣೆಯ ಪ್ರಕಾರ, ಅವರ ಸುದೀರ್ಘ ಹಾಗೂ ಮಹತ್ವದ ಸಿನಿಪಯಣವನ್ನು ಗುರುತಿಸಿ ಈ ಗೌರವ ನೀಡಲಾಗಿದೆ.ಕನ್ನಡ ಚಿತ್ರರಂಗದಿಂದ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಎರಡನೇ ನಟ ಎಂಬ ಹೆಗ್ಗಳಿಕೆಗೆ ಅನಂತ ನಾಗ್ ಪಾತ್ರರಾಗಿದ್ದು, 1995ರಲ್ಲಿ ವರನಟ ಡಾ. ರಾಜ್‌ಕುಮಾರ್ ಅವರು ಈ ಪ್ರಶಸ್ತಿಯನ್ನು ಪಡೆದಿದ್ದರು.
​ಭಾರತೀಯ ಚಿತ್ರರಂಗಕ್ಕೆ ನೀಡುವ ಅತ್ಯುನ್ನತ ಗೌರವವಾದ ದಾದಾಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ಭಾರತ ಸರ್ಕಾರವು 1969ರಲ್ಲಿ ಸ್ಥಾಪಿಸಿದೆ. ಭಾರತದ ಮೊದಲ ಪೂರ್ಣಪ್ರಮಾಣದ ಚಲನಚಿತ್ರ ‘ರಾಜಾ ಹರಿಶ್ಚಂದ್ರ’ ನಿರ್ದೇಶಿಸಿದ್ದ ದಾದಾಸಾಹೇಬ ಫಾಲ್ಕೆ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಭಾರತೀಯ ಸಿನಿಮಾದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಕಲಾವಿದರನ್ನು ಈ ಪ್ರಶಸ್ತಿಯ ಮೂಲಕ ಗೌರವಿಸಲಾಗುತ್ತದೆ.

 

ಭಾರತೀಯ ಸಿನಿಮಾದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಹೆಸರಿನಲ್ಲಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ. ಸಿನಿಮಾ ರಂಗದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯನ್ನು ಪಡೆದ ಬಗ್ಗೆ ಭಾರತದ ಪ್ರಧಾನ ಮಂತ್ರಿಗಳು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ,ಅವರ ಮೂಲ ಜಿಲ್ಲೆಯಾದ ಉತ್ತರಕನ್ನಡದ ಅನೇಕ ಗಣ್ಯರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.