Banner Ad

ಸುದ್ದಿ ಕನ್ನಡ ವಾರ್ತೆ

ತೀರ್ಥಹಳ್ಳಿ : ಆಗುಂಬೆಯ ಲಕ್ಕುಂದ ಮನೆಯೊಂದರಲ್ಲಿ ಹಾಡಹಗಲೇ ದರೋಡೆ ಸಂಭವಿಸಿದೆ. ಮನೆಯಲ್ಲಿ ಒಬ್ಬರೇ ಇದ್ದ 74 ವರ್ಷದ ವೃದ್ಧೆಯನ್ನು ಕಟ್ಟಿಹಾಕಿ, ಅವರ ಮೈಮೇಲಿದ್ದ ಹಾಗೂ ಬೀರುವಿನಲ್ಲಿದ್ದ ಸುಮಾರು 18 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದರೋಡೆಕೋರರು ದೋಚಿದ್ದಾರೆ. ವಿಶಾಲಾಕ್ಷಿ ಅವರ ಪತಿ 15 ವರ್ಷದ ಹಿಂದೆ ನಿಧನರಾಗಿದ್ದಾರೆ. ಹಾಗಾಗಿ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಏಪ್ರಿಲ್ 21ರ ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ವಿಶಾಲಾಕ್ಷಿ ಅವರು ಮನೆಯಲ್ಲಿ ಮಲಗಿದ್ದಾಗ ಯಾರೋ ಬಾಗಿಲು ತಟ್ಟಿದ ಶಬ್ದ ಕೇಳಿಸಿತು. ಕಿಟಕಿಯ ಮೂಲಕ ನೋಡಿದಾಗ ಮೂವರು ಅಪರಿಚಿತರು ನಿಂತಿದ್ದರು. ಮೂವರು ಅಪರಿಚಿತರು ಕುಡಿಯಲು ನೀರು ಕೊಡಿ ಎಂದು ವಿಶಾಲಾಕ್ಷಿ ಅವರನ್ನು ಕೇಳಿದ್ದರು. ಬಾಗಿಲು ತೆರೆಯದ ವಿಶಾಲಾಕ್ಷಿ ಅವರು ಕಿಟಕಿಯ ಮೂಲಕವೆ ನಲ್ಲಿಯಲ್ಲಿದ್ದ ನೀರು ಕುಡಿಯಿರಿ ಎಂದು ತಿಳಿಸಿದ್ದಾರೆ .

Banner Ad

ಮೂವರು ಅಪರಿಚಿತರು ಅಲ್ಲೇ ಮರೆಯಾಗಿ ನಿಂತಿದ್ದರು. ಕೆಲವು ನಿಮಿಷದ ಬಳಿಕ ಅನುಮಾನಗೊಂಡ ವೃದ್ಧೆ ಹಿತ್ತಲ ಬಾಗಿಲು ತೆರೆದು ಪರಿಶೀಲಿಸಿದರು. ಆಗ ಮೂವರು ಒಮ್ಮೆಲೆ ಮನೆಯೊಳಗೆ ನುಗ್ಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಒಳ ನುಗ್ಗಿದ ದರೋಡೆಕೋರರು ವಿಶಾಲಾಕ್ಷಿ ಅವರ ಬಾಯಿಯನ್ನು ಒತ್ತಿ ಹಿಡಿದು ಬೆದರಿಸಿದ್ದರು. ಬಳಿಕ ಅವರ ಕೈಗಳನ್ನು ಸೀರೆಯಿಂದ ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದರು. ಈ ವೇಳೆ ವೃದ್ಧೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದರೋಡೆಕೋರರು ಮನೆಯಲ್ಲಿದ್ದ ಬೀರುವನ್ನು ಒಡೆದು ಅದರಲ್ಲಿದ್ದ ಆಭರಣಗಳನ್ನು ದೋಚಿದ್ದಾರೆ. ವಿಶಾಲಾಕ್ಷಿ ಅವರ ಮೈಮೇಲಿದ್ದ ಚಿನ್ನದ ಸರ, ಎರಡು ಕೈಬಳೆ, ಕಿವಿ ಓಲೆ ಸೇರಿದಂತೆ ಒಟ್ಟು 146 ಗ್ರಾಂ ತೂಕದ ವಿವಿಧ ಚಿನ್ನಾಭರಣ ಕಸಿದುಕೊಂಡಿದ್ದಾರೆ. ಇವುಗಳ ಮೌಲ್ಯ ಅಂದಾಜು 17.52 ಲಕ್ಷ ಎನ್ನಲಾಗಿದೆ. ಇದಲ್ಲದೆ ಬೀರುವಿನಲ್ಲಿದ್ದ 50,000 ನಗದು ಹಾಗೂ ಟೇಬಲ್ ಮೇಲಿದ್ದ ಪರ್ಸ್‌ನಲ್ಲಿದ್ದ 1,000 ಹಣ ಮತ್ತು ಒಂದು ಮೊಬೈಲ್ ಫೋನ್ ಅನ್ನು ದೋಚಿದ್ದಾರೆ. ಬಳಿಕ ಹಿತ್ತಲ ಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ. ಇನ್ನು, ವಿಷಯ ತಿಳಿದು ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್‌ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ವೃದ್ಧೆ ವಿಶಾಲಾಕ್ಷಿ ಮತ್ತು ಅವರ ಸಂಬಂಧಿಕರನ್ನ ಭೇಟಿಯಾಗಿ ಘಟನೆ ಕುರಿತು ಮಾಹಿತಿ ಪಡೆದರು. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Banner Ad