ಸುದ್ದಿ ಕನ್ನಡ ವಾರ್ತೆ
ಬೆಂಗಳೂರು: ಸಿಲಿಕಾನ್ ಸಿಟಿ ಸಮೀಪದ ಮರಳಕುಂಟೆ ಗ್ರಾಮದಲ್ಲಿ
ಅಪರೂಪದ ‘ನಿಯೋಹೆಟೆರೋಫ್ರಿಕ್ಟಸ್‌’ (Neoheterophrictus sp) ಪ್ರಜಾತಿಯ ಟರಾಂಟುಲಾ ಜೇಡವೊಂದು ಪತ್ತೆಯಾಗಿದೆ. ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್ ನಾಯಕ, ಪ್ರಕೃತಿ ಪ್ರೇಮಿ ಸುನೀಲಕುಮಾರ್, ಕುಲದೀಪ್ ಮತ್ತು ಪೂಜಿತ್ ಅವರು ಸರಿಸೃಪಗಳ ಹುಡುಕಾಟದಲ್ಲಿದ್ದಾಗ ಈ ದೈತ್ಯ ಜೇಡ ಕಂಡುಬಂದಿದೆ.

ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿ ಕಂಡುಬರುವ ಈ ಜೇಡಗಳು, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ. ಇವುಗಳ ಕಾಲಿನ ತುದಿಯಲ್ಲಿ ಬಿಳಿ ಬಣ್ಣದ ತುಪ್ಪಳವಿರುವುದರಿಂದ ಇವುಗಳನ್ನು ವೈಟ್ ಸಾಕ್ಸ್ ಟರಾಂಟುಲಾ ಎಂದೂ ಕರೆಯಲಾಗುತ್ತದೆ. 1.5 ರಿಂದ 2 ಇಂಚು ಗಾತ್ರವಿರುವ ಇವು, ಕಪ್ಪು-ಹಸಿರು ಅಥವಾ ಬೂದು ಬಣ್ಣದಲ್ಲಿರುತ್ತವೆ.

ಈ ಜೇಡಗಳು ಕಲ್ಲುಗಳ ಸಂದು ಅಥವಾ ಎಲೆಗಳ ಕೆಳಗೆ ಬಿಲ ತೋಡಿ ವಾಸಿಸುತ್ತವೆ. ಇವು ಕೃಷಿ ಹಾನಿಕಾರಕ ಕೀಟಗಳನ್ನು ಭಕ್ಷಿಸುವ ಮೂಲಕ ನೈಸರ್ಗಿಕ ಕೀಟ ನಿಯಂತ್ರಕಗಳಾಗಿ ಕಾರ್ಯ ನಿರ್ವಹಿಸುತ್ತವೆ. ಇವುಗಳ ಉಪಸ್ಥಿತಿಯು ಆ ಭಾಗದ ಪರಿಸರ ಆರೋಗ್ಯವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಈ ಜೇಡಗಳು ವಿಷಕಾರಿಯಾದರೂ ಮಾನವರಿಗೆ ಮಾರಣಾಂತಿಕವಲ್ಲ. ಇವು ಕಚ್ಚಿದರೆ ಜೇನುನೊಣ ಕಚ್ಚಿದಷ್ಟೇ ನೋವಾಗಬಹುದು. ಇವುಗಳ ಸಂರಕ್ಷಣೆ ಇಂದಿನ ಅಗತ್ಯವಾಗಿದೆ ಎನ್ನುತ್ತಾರೆ ಸಂಶೋಧಕ ಮಂಜುನಾಥ ಎಸ್. ನಾಯಕ. ಅರಣ್ಯ ನಾಶ, ನಗರೀಕರಣದಿಂದಾಗಿ ಈ ಅಪರೂಪದ ಜೇಡಗಳ ಸಂತತಿ ಕ್ಷೀಣಿಸುತ್ತಿದೆ. ಪೂರ್ವ ಘಟ್ಟ ಹಾಗೂ ಬಯಲುಸೀಮೆಯ ಒಣ ಪ್ರದೇಶಗಳಲ್ಲಿ ಇಂತಹ ಜೇಡಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.