Banner Ad

ಸುದ್ದಿ ಕನ್ನಡ ವಾರ್ತೆ

ಚಾಮರಾಜನಗರ: ವರ್ಷದ ಮೊದಲ ಚಂದ್ರಗ್ರಹಣದ ಸಂದರ್ಭದಲ್ಲಿಯೂ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಎಂದಿನಂತೆ ಮಾದಪ್ಪನ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

Banner Ad

ಚಂದ್ರಗ್ರಹಣ ಹಿನ್ನಲೆಯಲ್ಲಿ ಮಂಗಳವಾರ ರಾಜ್ಯದ ಬಹುತೇಕ ಎಲ್ಲಾ ದೇಗುಲಗಳ ಬಾಗಿಲುಗಳು ಬಂದ್ ಆಗಿದ್ದವು. ಇದರಿಂದ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಆದರೆ ಜಿಲ್ಲೆಯಲ್ಲಿ ಪ್ರಸಿದ್ಧ ಧಾರ್ಮಿಕ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಮಾದಪ್ಪನಿಗೆ ಎಂದಿನಂತೆ ತ್ರಿಕಾಲ ಪೂಜೆ ನಡೆಯಿತು.

ಶ್ರೀಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ ದೇಗುಲದ ಮುಂಭಾಗ ಗಂಧದಕಡ್ಡಿ, ಕರ್ಪೂರ ಹಚ್ಚಿ ಮಾದಪ್ಪನನ್ನು ನೆನೆದು ಕೈ ಮುಗಿದು ಪ್ರಾರ್ಥಿಸಿದರು.

ಬೆಳಗ್ಗೆಯಿಂದ ಸಂಜೆಯತನಕ ದೇಗುಲದ ಸುತ್ತ ಹುಲಿ, ಬಸವ ಹಾಗೂ ರುದ್ರಾಕ್ಷಿ ವಾಹನಗಳ ಉತ್ಸವಗಳು ಜರುಗಿದವು.
ಬೆಳಗ್ಗೆ ಬೆಳ್ಳಿ ತೇರಿನ ಉತ್ಸವ ನಡೆಯಿತು. ಸಂಜೆ ೭ರಲ್ಲಿ ಚಿನ್ನದ ತೇರಿನ ಉತ್ಸವ ಜರುಗಿತು. ಹರಕೆ ಹೊತ್ತ ಭಕ್ತರು ದಂಡಿನ ಹೊತ್ತು ಸಾಗಿದರು. ಉಘೇ ಮಾದಪ್ಪ ಉಘೇ ಘೋಷಣೆಗಳನ್ನು ಮೊಳಗಿಸಿದರು. ರಾತ್ರಿ ೮ರ ವೇಳೆಯಲ್ಲಿ ಮಾದಪ್ಪನಿಗೆ ಅಭಿಷೇಕದ ಪೂಜೆಯನ್ನು ನೆರವೇರಿಸುವುದರ ಮೂಲಕ ಮಹಾ ಮಂಗಳಾರತಿ ಬೆಳಗಿಸಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಎಂದಿನಂತೆ ೯.೩೦ರ ಬಳಿಕ ದೇಗುಲದ ಬಾಗಿಲನ್ನು ಮುಚ್ಚಲಾಯಿತು. ಹಾಗಾಗಿ ಮಾದಪ್ಪನ ಸನ್ನಿಧಿಗೆ ಚಂದ್ರಗ್ರಹಣದ ಬಿಸಿ ತಟ್ಟಲಿಲ್ಲ.

Banner Ad