ಸುದ್ದಿ ಕನ್ನಡ ವಾರ್ತೆ
ಪಣಜಿ: ಗೋವಾ ರಾಜಧಾನಿ ವಣಜೀಯ ಕಲಾ ಅಕಾಡೆಮಿ ಆವರದಲ್ಲಿ ಶುಕ್ರವಾರ ಕಾರ್ಮಿಕನ ಹತ್ಯೆಗೈದ ಘಟನೆ ನಡೆದಿದೆ. ಈ ಘಟನೆಯು ಆತಂಕಕ್ಕೆ ಕಾರಣವಾಗಿದೆ. ಮೃತ ವ್ಯಕ್ತಿಯು ಕಾರ್ಮಿಕನಾಗಿದ್ದು ಈತನ ತಲೆಯ ಮೇಲೆ ಕಬ್ಬಿಣದ ಸರಳು ಅಥವಾ ಅಂತಹ ಗಟ್ಟಿಯಾದ ವಸ್ತುವಿನಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.
ಘಟನೆ ಕುರಿತಂತೆ ಮಾಹಿತಿ ಲಭ್ಯವಾದ ಕೂಡಲೇ ಪಣಜಿ ಪೊಲೀಸ್ ಠಾಣೆಯ ಪೊಲೀಸರ ತಂಡ ಮತ್ತು ವಿಧಿವಿಜ್ಞಾನ ತಜ್ಞರ ತಂಡ ಘಟನಾಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
ಈ ಘಟನೆಯ ನಂತರ ಕಲಾ ಅಕಾಡೆಮಿಯ ಮುಂದಿನ ಮುಖ್ಯ ಗೇಟ್ ಅನ್ನು ಬಂದ್ ಮಾಡಲಾಗಿದೆ. ಸಾರ್ವಜನಿಕರ ಪ್ರವೇಶಕ್ಕೆ ಸದ್ಯ ಸಂಪೂರ್ಣ ನಿರ್ಭಂಧ ಹೇರಲಾಗಿದೆ. ಮೃತ ವ್ಯಕ್ತಿಯ ರಕ್ತದ ಮಾದರಿಗಳು , ಬೆರಳಚ್ಚು ಮತ್ತು ಇತರ ಪುರಾವೆಗಳನ್ನು ಸಂಗ್ರಹಿಸಲು ವಿಧಿ ವಿಜ್ಞಾನ ತಂಡ ಕ್ರಮ ಕೈಗೊಂಡಿದೆ.
ಕೊಲೆ ಆರೋಪಿಯ ಪತ್ತೆಗಾಗಿ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಇತರ ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
