Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಪ್ರಸ್ತುತ ಎಲ್‍ಪಿಜಿ ಸಿಲಿಂಡರ್‍ಗಳ ದೊಡ್ಡ ಕೊರತೆ ಇದ್ದು, ರಾಜ್ಯದಲ್ಲಿ ಕೇವಲ 15 ದಿನಗಳ ಸ್ಟಾಕ್ ಮಾತ್ರ ಉಳಿದಿದೆ ಎಂದು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಬುಧವಾರ ವಿಧಾನಸಭೆಯಲ್ಲಿ ಆಘಾತಕಾರಿ ಮಾಹಿತಿಯನ್ನು ನೀಡಿದರು. ಸಲ್ಗಾಂವ್ ಶಾಸಕ ಕೇದಾರ್ ನಾಯಕ್ ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಮುಖ್ಯಮಂತ್ರಿಗಳು- ರಾಜ್ಯದ ಈ ಎಲ್ ಪಿಜಿ ಪರಿಸ್ಥಿತಿಯನ್ನು ವಿವರಿಸಿದರು. ಮುಖ್ಯಮಂತ್ರಿಗಳು ಈ ಗಂಭೀರ ವಿಷಯದ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವರೊಂದಿಗೆ ತಡರಾತ್ರಿ ಚರ್ಚಿಸಿದರು ಮತ್ತು ಕೇಂದ್ರ ಸರ್ಕಾರವು ತಕ್ಷಣವೇ ರಾಜ್ಯದಿಂದ ಅನಿಲ ಸ್ಟಾಕ್ ಕುರಿತು ವಿವರವಾದ ವರದಿಯನ್ನು ಕೋರಿದೆ.

 

Banner Ad

ಶಾಸಕ ಕೇದಾರ್ ನಾಯಕ್ ಅವರು ರಾಜ್ಯದಲ್ಲಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‍ಗಳ ಪೂರೈಕೆಯಲ್ಲಿನ ಕೊರತೆಯ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ವಿಶೇಷವಾಗಿ, ಮೀನುಗಾರಿಕೆಗಾಗಿ ಆಳ ಸಮುದ್ರಕ್ಕೆ ಹೋಗುವ ಟ್ರಾಲರ್‍ಗಳು ಮತ್ತು ದೊಡ್ಡ ದೋಣಿಗಳ ಕಾರ್ಮಿಕರು 10-10 ದಿನಗಳ ಕಾಲ ಸಮುದ್ರದಲ್ಲಿಯೇ ಇರಬೇಕಾಗುತ್ತದೆ, ಅಂತಹ ಸಮಯದಲ್ಲಿ ಅವರಿಗೆ ಅಡುಗೆಗೆ ಗ್ಯಾಸ್ ಬೇಕಾಗುತ್ತದೆ. ಇದರ ಹೊರತಾಗಿ, ಸಣ್ಣ ಹೋಟೆಲ್‍ಗಳು ಮತ್ತು ರೆಸ್ಟೋರೆಂಟ್‍ಗಳು ಸಹ ವಾಣಿಜ್ಯ ಸಿಲಿಂಡರ್‍ಗಳು ಸಿಗದೆ ಸಮಸ್ಯೆಗಳನ್ನು ಎದುರಿಸುತ್ತಿವೆ. ಗ್ಯಾಸ್ ಏಜೆನ್ಸಿಯನ್ನು ವಿಚಾರಿಸಿದಾಗ, ವಾಣಿಜ್ಯ ಸಿಲಿಂಡರ್‍ಗಳ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂಬ ಉತ್ತರ ಬರುತ್ತಿದೆ ಎಂಬ ವಿಷಯ ಎತ್ತುವ ಮೂಲಕ ನಾಯಕ್ ಸದನದ ಗಮನ ಸೆಳೆದರು.

ಈ ಕುರಿತು ವಿವರಣೆ ನೀಡಿದ ಮುಖ್ಯಮಂತ್ರಿ ಸಾವಂತ್- ವಾಣಿಜ್ಯ ಸಿಲಿಂಡರ್‍ಗಳ ಪೂರೈಕೆಯನ್ನು ನಿಲ್ಲಿಸಲು ನಿನ್ನೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಿದರು. ಈ ಸಮಸ್ಯೆಯ ಗಂಭೀರತೆಯನ್ನು ಗುರುತಿಸಿ, ಕೇಂದ್ರ ಸರ್ಕಾರವು ಇಂದು ಮಧ್ಯಾಹ್ನ ಕಾರ್ಯದರ್ಶಿ ಮಟ್ಟದಲ್ಲಿ ವಿಶೇಷ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಯಾವ ರಾಜ್ಯದಲ್ಲಿ ಎಷ್ಟು ಸ್ಟಾಕ್ ಲಭ್ಯವಿದೆ ಮತ್ತು ದೇಶೀಯ ಮತ್ತು ವಾಣಿಜ್ಯ ಬಳಕೆಗೆ ಎಷ್ಟು ಸರಬರಾಜು ಮಾಡಬಹುದು ಎಂಬುದರ ಕುರಿತು ವಿವರವಾದ ಪರಿಶೀಲನೆ ನಡೆಸಲಿದೆ. ಗೋವಾದ ವಾಸ್ತವಿಕ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ಉಲ್ಲೇಖಿಸಿದರು.

 

ಕೇಂದ್ರ ಸರ್ಕಾರ ವರದಿಯನ್ನು ಪರಿಶೀಲಿಸಿದ ನಂತರವೇ, ರಾಜ್ಯದ ಅನಿಲ ವಿತರಕರು ಮತ್ತು ಏಜೆನ್ಸಿಗಳಿಗೆ ಹೆಚ್ಚಿನ ಸೂಚನೆಗಳನ್ನು ನೀಡಲಾಗುವುದು. ಪ್ರಸ್ತುತ, ರಾಜ್ಯವು ಕನಿಷ್ಠ 15 ದಿನಗಳವರೆಗೆ ಸಾಕಷ್ಟು ಸ್ಟಾಕ್ ಅನ್ನು ಹೊಂದಿದೆ. ನಾನೇ ಸ್ವತಃ ಏಜೆಂಟ್‍ಗಳು ಮತ್ತು ಸ್ಟಾಕ್‍ನ ವಿವರಗಳ ಮೇಲೆ ನಿಗಾ ಇಡುತ್ತಿದ್ದೇನೆ. ಮುಂಬರುವ ದಿನಗಳಲ್ಲಿ ಸುಗಮ ಅನಿಲ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

Banner Ad