ಸುದ್ದಿ ಕನ್ನಡ ವಾರ್ತೆ
ಫೋಂಡಾ (ಗೋವಾ): ಇಲ್ಲಿನ ಫೋಂಡಾ ಕನ್ನಡ ಸಂಘದ ವತಿಯಿಂದ ಆಗಸ್ಟ್ 15ರಂದು ಪತಂತಳಿಯ ‘ನಂದನವನ ಹಾಲ್’ನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಶ್ರಾವಣ ಸಂಭ್ರಮ–2026’ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮವು ಮುಖ್ಯ ಅತಿಥಿಗಳಾದ ಇಸ್ಕಾನ್ನ ಅರ್ಜುನಪ್ರಿಯ ದಾಸ ಅವರಿಂದ ದೀಪ ಪ್ರಜ್ವಲನೆ ಮೂಲಕ ಉದ್ಘಾಟನೆಗೊಂಡಿತು.
ಬಳಿಕ ಸಂಘದ ಅಧ್ಯಕ್ಷರಾದ ಶೈಲೇಶ್ ಪಾಟೀಲ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ ಅಧ್ಯಕ್ಷೀಯ ಭಾಷಣ ಮಾಡಿದರು. ನಂತರ ಮುಖ್ಯ ಅತಿಥಿಗಳಾದ ಅರ್ಜುನಪ್ರಿಯ ದಾಸ ಅವರು ಮಾತನಾಡಿ, ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಬೇಕು ಎಂದು ಹಿತನುಡಿಗಳನ್ನಾಡಿದರು.
ಅನಂತರ ಮಕ್ಕಳ ಹಾಗೂ ಸಂಘದ ಸದಸ್ಯರ ಭಾಗವಹಿಸುವಿಕೆಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನೃತ್ಯ, ಭಕ್ತಿ ಗೀತೆ, ವಚನ ಗಾಯನ ಹಾಗೂ ವಿವಿಧ ಕಲಾ ಪ್ರದರ್ಶನಗಳು ನೆರೆದಿದ್ದವರ ಮನಸೂರೆಗೊಂಡವು. ಸ್ಥಳೀಯ ಕನ್ನಡಿಗರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಕಾರ್ಯದರ್ಶಿ ವಿರೂಪಾಕ್ಷ ತೊಂಡಿಹಾಳ ಅವರು ವಂದನಾರ್ಪಣೆ ಸಲ್ಲಿಸಿ, ಮುಖ್ಯ ಅತಿಥಿಗಳು, ಸದಸ್ಯರು, ಭಾಗವಹಿಸಿದ ಎಲ್ಲಾ ಮಕ್ಕಳು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದರು.
ಸಂಘದ ಅಧ್ಯಕ್ಷರಾದ ಶೈಲೇಶ್ ಪಾಟೀಲ ಅವರು ಸಹ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
