ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ವಾಸ್ಕೊದ ಪ್ರಸಿದ್ಧ 127 ನೇಯ ಶ್ರೀ ದಾಮೋದರ ದೇವಸ್ಥಾನದ ಭಜನಾ ಸಪ್ತಾಹವು ಶೃದ್ಧಾ ಭಕ್ತಿಯಿಂದ ಮಂಗಳವಾರ ಆರಂಭಗೊಂಡಿದೆ. ಶ್ರೀ ದಾಮೋದರ ದೇವರಿಗೆ ಫಲ ಸಮರ್ಪಣೆಯ ಮೂಲಕ ಭಜನಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.

ಉದ್ಯಮಿ ಪ್ರಶಾಂತ್ ಜೋಶಿ ರವರು ಶ್ರೀ ದಾಮೋದರ ದೇವರಿಗೆ ಫಲ ಸಮರ್ಪಿಸುವ ಮೂಲಕ ಪ್ರಸಿದ್ಧ ಭಜನಾ ಸಪ್ತಾಹಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವಾಲಯವು ಭಜನೆ, ತಾಳಮೃದಂಗ ದ ಮೂಲಕ ಭಕ್ತಿ ಪೂರ್ಣ ವಾತಾವರಣದಿಂದ ತುಂಬಿತ್ತು.

ದೇವರ ದರ್ಶನಕ್ಕಾಗಿ ಭಕ್ತಾದಿಗಳ ದೊಡ್ಡ ಸರತಿ ಸಾಲೇ ಇತ್ತು. ಸಚಿವ ಮಾವಿನ್ ಗುದಿನ್ಹೊ, ಶಾಸಕ ಕೃಷ್ಣಾ ಸಾಲಕರ್, ಶಾಸಕ ಸಂಕಲ್ಪ ಅಮೋಣಕರ್, ದೇವರ ದರ್ಶನ ಪಡೆದುಕೊಂಡರು. ನೂರಾರು ವರ್ಷಗಳ ಇತಿಹಾಸವಿರುವ ಈ ಭಜನಾ ಸಪ್ತಾಹವು ವಾಸ್ಕೊ ಪ್ರದೇಶದಲ್ಲಿ ಭಕ್ತಿಪೂರ್ವಕ ವಾತಾವರಣ ಸೃಷ್ಠಿಸಿದೆ.

ಮಂಗಳವಾರ ಮಧ್ಯಾನ್ಹದಿಂದ ಬುಧವಾರ ಮಧ್ಯಾನ್ಹ ಈ ಭಜನಾ ಸಪ್ತಾಹದ ಭಜನೆಯು ಪೂರ್ಣಗೊಳ್ಳುತ್ತದೆ. ಆದರೆ ವಾರ ಪೂರ್ತಿ ಜಾತ್ರೆಯು ಮುಂದುವರೆಯಲಿದೆ.
ಗೋವಾ ರಾಜ್ಯಾದ್ಯಂತ ಹಾಗೂ ನೆರೆಯ ರಾಜ್ಯಗಳಾದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಈ ಭಜನಾ ಸಪ್ತಾಹಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಮುಂದಿನ ಒಂದು ವಾರ ವಾಸ್ಕೊದಲ್ಲಿ ಶ್ರೀ ದಾಮೋದರ ಭಜನಾ ಸಪ್ತಾಹದ ಹಿನ್ನೆಲೆಯಲ್ಲಿ ಹಬ್ಬದ ವಾತಾವರಣ ಇರಲಿದೆ.