ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ಬಿ.ಎಸ್.ಎನ್.ಎಲ್ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ತೀವ್ರಗೊಂಡಿದ್ದು, ಟವರ್‌ನ ಮೂರು ಅಂಟೆನಾಗಳ ಪೈಕಿ ಎರಡು ಅಂಟೆನಾಗಳು ಕೆಟ್ಟುಹೋಗಿವೆ. ಇದರಿಂದ ಗ್ರಾಮದ ಬಹುತೇಕ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸರಿಯಾಗಿ ಲಭ್ಯವಾಗದೇ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

 

ಸುಮಾರು ಒಂದು ವರ್ಷದ ಹಿಂದೆ ಗ್ರಾಮದಲ್ಲಿ ಬಿ.ಎಸ್.ಎನ್.ಎಲ್ ಮೊಬೈಲ್ ನೆಟ್‌ವರ್ಕ್ ಟವರ್ ಅಳವಡಿಸಲಾಗಿತ್ತು. ಆದರೆ ಟವರ್‌ನ ಮೂರು ಆಂಟೆನಾಗಳಲ್ಲಿ ಎರಡು ಆಂಟೆನಾಗಳು ಕಾರ್ಯನಿರ್ವಹಿಸದೇ ಇರುವುದರಿಂದ ಕೇವಲ ಒಂದು ಭಾಗದಲ್ಲಿ ಮಾತ್ರ ನೆಟ್‌ವರ್ಕ್ ಲಭ್ಯವಾಗುತ್ತಿದೆ. ಕರೆಗಳು ಪದೇಪದೇ ಕಡಿತಗೊಳ್ಳುತ್ತಿದ್ದು, ಇಂಟರ್ನೆಟ್ ಸೇವೆಯೂ ಸಮರ್ಪಕವಾಗಿ ದೊರೆಯುತ್ತಿಲ್ಲ.

 

ಈ ಸಮಸ್ಯೆ ಪರಿಹರಿಸುವಂತೆ ಗ್ರಾಮಸ್ಥರು ಈಗಾಗಲೇ ಜೋಯಿಡಾ ಬಿ.ಎಸ್.ಎನ್.ಎಲ್ ಕಚೇರಿಗೆ ಎರಡು-ಮೂರು ಬಾರಿ ತೆರಳಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ಹಾಗೂ ಲಿಖಿತವಾಗಿ ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ತಹಶೀಲ್ದಾರರಿಗೂ ಮನವಿ ಪತ್ರ ನೀಡಿದ್ದಾರೆ. ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಅಂಟೆನಾ ಕೆಟ್ಟುಹೋಗಿರುವುದನ್ನು ಪರಿಶೀಲಿಸಿದ್ದರೂ, ಈವರೆಗೆ ದುರಸ್ತಿ ಅಥವಾ ಹೊಸ ಅಂಟೆನಾ ಅಳವಡಿಸುವ ಕಾರ್ಯ ನಡೆದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
‘ಇಂದು ಬರುತ್ತೇವೆ, ನಾಳೆ ಬರುತ್ತೇವೆ’ ಎಂದು ಅಧಿಕಾರಿಗಳಿಂದ ಭರವಸೆ ಸಿಗುತ್ತಿದೆಯೇ ಹೊರತು ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂಬುದು ಗ್ರಾಮಸ್ಥರ ಅಸಮಾಧಾನವಾಗಿದೆ.

ಇದಲ್ಲದೇ, ಟವರ್‌ಗೆ ಸಮರ್ಪಕ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಬ್ಯಾಟರಿ ಚಾರ್ಜ್ ಆಗದಿರುವ ಸಮಸ್ಯೆಯೂ ಇದೆ. ಟವರ್ ಸುತ್ತಲೂ ಸುರಕ್ಷತಾ ಕಾಂಪೌಂಡ್ ಅಥವಾ ಬೇಲಿ ನಿರ್ಮಿಸದಿರುವುದರಿಂದ ಮಕ್ಕಳು ಹಾಗೂ ಜಾನುವಾರುಗಳಿಗೆ ಅಪಾಯ ಎದುರಾಗುವ ಸಾಧ್ಯತೆಯಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣ, ರೈತರಿಗೆ ಅಗತ್ಯ ಮಾಹಿತಿ, ಸರ್ಕಾರಿ ಸೇವೆಗಳು ಹಾಗೂ ತುರ್ತು ಸಂದರ್ಭಗಳಲ್ಲಿ ಸಂಪರ್ಕ ಸಾಧಿಸಲು ಮೊಬೈಲ್ ನೆಟ್‌ವರ್ಕ್ ಅತ್ಯಗತ್ಯವಾಗಿದೆ. ಆದರೆ ಡಿಗ್ಗಿ ಗ್ರಾಮಸ್ಥರು ಮೂಲಭೂತ ಸಂವಹನ ಸೌಲಭ್ಯಕ್ಕಾಗಿ ಪರದಾಡುವಂತಾಗಿದೆ.

ಸಂಬಂಧಪಟ್ಟ ಬಿ.ಎಸ್.ಎನ್.ಎಲ್ ಉನ್ನತ ಅಧಿಕಾರಿಗಳು ಕೂಡಲೇ ಡಿಗ್ಗಿ ಗ್ರಾಮಕ್ಕೆ ತಾಂತ್ರಿಕ ತಂಡವನ್ನು ಕಳುಹಿಸಿ ಕೆಟ್ಟುಹೋಗಿರುವ ಎರಡು ಆಂಟೆನಾಗಳನ್ನು ಬದಲಾಯಿಸಬೇಕು. ಟವರ್‌ಗೆ ಸಮರ್ಪಕ ವಿದ್ಯುತ್ ಸಂಪರ್ಕ ಕಲ್ಪಿಸಿ, ಸುರಕ್ಷತಾ ಕಾಂಪೌಂಡ್ ನಿರ್ಮಿಸುವ ಮೂಲಕ ಗ್ರಾಮಸ್ಥರಿಗೆ ನಿರಂತರ ನೆಟ್‌ವರ್ಕ್ ಸೇವೆ ಒದಗಿಸಬೇಕು ಎಂದು ಡಿಗ್ಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.