ಸುದ್ಧಿಕನ್ನಡ ವಾರ್ತೆ
ಪಣಜಿ: ಕಳೆದ ಕೆಲವು ತಿಂಗಳುಗಳಿಂದ ಸಿಂಧುದುರ್ಗ ಮತ್ತು ಗೋವಾ ಗಡಿ ಪ್ರದೇಶದಲ್ಲಿ ಓಡಾಡುತ್ತಿರುವ ಓಂಕಾರ ಎಂಬ ಆನೆಯ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಪಟಾಕಿ ಮತ್ತು ಬೆಂಕಿಯ ಉಂಡೆಯನ್ನು ಎಸೆಯುವ ಅಮಾನೀಯ ಕೃತ್ಯ ಇದೀಗ ಬೆಳಕಿಗೆ ಬಂದಿದೆ. ಶೇರ್ಲೆ ಟೆಕುಲವಾಡಿ ಪ್ರದೇಶದಲ್ಲಿ ಭತ್ತದ ಗದ್ದೆಗೆ ನುಗ್ಗಿದ ಆನೆಯ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಂಕಿ ಉಂಡೆ ಎಸೆಯುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಘಟನೆಯು ವನ್ಯಜೀವಿ ಪ್ರಿಯರು ಮತ್ತು ಸ್ಥಳೀಯ ನಾಗರೀಕರಲ್ಲಿ ಆಕ್ರೋಶವನ್ನು ಹುಟ್ಟು ಹಾಕಿದೆ. ವನ್ಯಜೀವಿಗಳನ್ನು ರಕ್ಷಿಸುವ ಮತ್ತು ಪೆÇೀಷಿಸುವ ಪ್ರಮುಖ ಜವಾಬ್ದಾರಿಯನ್ನು ಹೊಂದಿರುವ ವ್ಯವಸ್ಥೆಯ ಸಿಬ್ಬಂದಿ ಇಂತಹ ಕ್ರೂರ ಅಮಾನವೀಯ ಮತ್ತು ಹಿಂಸಾತ್ಮಕ ವಿಧಾನಗಳನ್ನು ಬಳಸುತ್ತಿದೆ. ಮೂಕ ಪ್ರಾಣಿಗಳಿಗೆ ಯಾರು ರಕ್ಷಣೆ ನೀಡುತ್ತಾರೆ., ಎಂಬ ಪ್ರಶ್ನೆ ವ್ಯಕ್ತವಾಗುತ್ತಿದೆ. ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಲ್ಲೆಡೆ ಆಗ್ರಹ ವ್ಯಕ್ತವಾಗುತ್ತಿದೆ.

ಓಂಕಾರ ಎಂಬ ಆನೆಯನ್ನು ಹೆದರಿಸಲು ಅಥವಾ ನಿಯಂತ್ರಿಸಲು ಇಂತಹ ಕ್ರೂರ ವಿಧಾನಗಳನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ಇಂತಹ ಹಿಂಸಾತ್ಮಕ ಧಾಳಿಯ ಅನೇಕ ಪ್ರಕರಣಗಳು ಈ ಹಿಂದೆ ಬೆಳಕಿಗೆ ಬಂದಿದೆ. ಕಳೆದ ವರ್ಷ ಬಂಡ ಪ್ರದೇಶದಲ್ಲಿ ಆನೆಯೋ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಕೆಲವರು ಅದರ ಮೇಲೆ ಪಟಾಕಿ ಮತ್ತು ಬಾಂಬ್ ಗಳನ್ನು ಎಸೆದಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಆನೆಗಳ ರಕ್ಷಣೆಗಾಗಿ ದೇಶದಲ್ಲಿ ಕಠಿಣ ಕಾನೂನು ನಿಬಂಧನೆಗಳಿವೆ. ಹೀಗಿರುವಾಗ ಈ ಎಲ್ಲ ನಿಬಂಧನೆಗಳನ್ನು ಗಾಳಿಗೆ ತೂರಿ ಅರಣ್ಯ ಇಲಾಖೆಯ ಸಿಬ್ಬಂದಿಗಳೇ ಇಂತಹ ಕೃತ್ಯ ಎಸಗಿರುವುದು ಖಂಡನೀಯ ಸಂಗತಿಯಾಗಿದೆ.