ಸುದ್ದಿ ಕನ್ನಡ ವಾರ್ತೆ
​ಯಲ್ಲಾಪುರ: ತಾಲೂಕಿನ ವಜ್ರಳ್ಳಿಯ ಸಮೀಪದ ಹೊನ್ನಗದ್ದೆ ಶಾಲೆಯ ಬಳಿ ಮಂಗಳವಾರ ಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಕಾಲುವೆಗೆಳಿದಿದೆ.
​ಬಾಸಲದಿಂದ ಹೊನ್ನಗದ್ದೆಗೆ ಹೋಗಿ ಯಲ್ಲಾಪುರಕ್ಕೆ ಬರುತ್ತಿದ್ದ ಬಸ್‌ ಹೊನ್ನಗದ್ದೆಯ ಶಾಲೆಯ ಬಳಿ ಕಾಲುವೆಗಿಳಿದಿದೆ. ಬಸ್‌ ನಲ್ಲಿ ಸ್ಥಳೀಯ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು.

 

ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ.
​ಬಿಎಸ್‌ಎನ್‌ಎಲ್‌ ಕೇಬಲ್‌ ಅಳವಡಿಕೆಗೆ ರಸ್ತೆ ಪಕ್ಕ ಗುಂಡಿಗಳನ್ನು ತೆಗೆಯಲಾಗಿದ್ದು,ಅರೆಬರೆಯಾಗಿ ಮುಚ್ಚಿ ಹೋಗಿದ್ದಾರೆ. ಇಕ್ಕಟ್ಟಾದ ರಸ್ತೆಯ ಅಕ್ಕಪಕ್ಕದ ಗಿಡಗಂಟೆಗಳನ್ನೂ ಸಂಬಂಧಿತ ಲೋಕೋಪಯೋಗಿ ಇಲಾಖೆ ಸ್ವಚ್ಛಗೊಳಿಸಿಲ್ಲ. ಹಾಗಾಗಿ ಎದುರಿನಿಂದ ವಾಹನ ಬಂದಾಗ ಸ್ವಲ್ಪ ಪಕ್ಕಕ್ಕೆ ಸರಿದರೂ ಗುಂಡಿಗೆ ಇಳಿಯುವುದು ಅನಿವಾರ್ಯವಾಗಿದೆ.

​ಇದು ಕೇವಲ ವಜ್ರಳ್ಳಿ-ಹೊನ್ನಗದ್ದೆ ರಸ್ತೆಯ ಕಥೆ ಮಾತ್ರವಲ್ಲ. ತಾಲೂಕಿನಲ್ಲಿ ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯೂ ಸೇರಿದಂತೆ ಬಹುತೇಕ ಗ್ರಾಮೀಣ ರಸ್ತೆಗಳ ಪಕ್ಕ ಇಂತಹ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
​ಕೇಬಲ್‌ ಅಳವಡಿಕೆಗಾಗಿ ಗುಂಡಿ ತೆಗೆದ ಗುತ್ತಿಗೆದಾರರು ಅದನ್ನು ಸಮರ್ಪಕವಾಗಿ ಮುಚ್ಚಿಲ್ಲ. ರಸ್ತೆ ನಿರ್ವಹಿಸುವ ಇಲಾಖೆಗಳೂ ಅದನ್ನು ಗಮನಿಸುತ್ತಿಲ್ಲ. ಇದರಿಂದ ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಗಿದೆ.