ಸುದ್ದಿ ಕನ್ನಡ ವಾರ್ತೆ
ಶಿರಸಿ: ಜೀವನದ ಕೊನೆಯ ಹಂತದಲ್ಲಿ ದುಃಖ, ಭಯ ಹಾಗೂ ಅಶಾಂತಿಯಿಂದ ಮುಕ್ತಿ ಹೊಂದಲು ಧರ್ಮಾಚರಣೆ, ಭಗವದ್ಭಕ್ತಿ ಮತ್ತು ಜ್ಞಾನ ಅತ್ಯಗತ್ಯ ಎಂದು ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

​ಸ್ವರ್ಣವಲ್ಲೀಯಲ್ಲಿ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆಯ ಹಿನ್ನೆಲೆಯಲ್ಲಿ ಶಿರಸಿ ಸೀಮೆಯ ಬಿಜ್ಜೆ ಭಾಗದ ಶಿಷ್ಯರು ಹಾಗೂ ಒಳಭಾಗದ ಶಿಷ್ಯರು ಸಲ್ಲಿಸಿದ ಪಾದಪೂಜೆ ಮತ್ತು ಭಿಕ್ಷಾ ಸೇವೆಯನ್ನು ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ಆಸೆಯೇ ದುಃಖಕ್ಕೆ ಮೂಲವಾಗಿದ್ದು, ಆಸೆಯ ಹಿಂದಿರುವ ಅಜ್ಞಾನವನ್ನು ಜ್ಞಾನದಿಂದ ನಿವಾರಿಸಿಕೊಳ್ಳಬೇಕು. ಭಗವಂತನಲ್ಲಿ ಶರಣಾಗತಿ, ಸತ್ಯ, ದಯೆ, ಪ್ರಾಮಾಣಿಕತೆ ಹಾಗೂ ಪಾವಿತ್ರ್ಯ ಹೊಂದಿರುವುದರ ಮೂಲಕ ಮನಸ್ಸನ್ನು ಶಾಂತಿಗೊಳಿಸಿಕೊಳ್ಳಬೇಕು. ದುಃಖವು ಪ್ರತಿಯೊಬ್ಬರಿಗೂ ಖಚಿತವಾಗಿದ್ದು, ಜೀವನದ ವಾಸ್ತವಿಕತೆಯನ್ನು ಅರಿತು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ದೀರ್ಘಕಾಲದ ಸಾಧನೆಯಿಂದ ಕಷ್ಟದ ಸಂದರ್ಭಗಳಲ್ಲೂ ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಲು ಸಾಧ್ಯ. ಧರ್ಮಾಚರಣೆ ಮತ್ತು ಭಕ್ತಿಯ ಮೂಲಕ ಜೀವನ ನಡೆಸಿದರೆ ಮನಸ್ಸಿಗೆ ಶಾಂತಿ ಹಾಗೂ ಜೀವನಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದು ತಿಳಿಸಿದರು.

​ಶಿಷ್ಯರು ಸನ್ಮಾರ್ಗ, ದಯೆ, ಪ್ರಾಮಾಣಿಕತೆ, ಭಗವದ್ಭಕ್ತಿ ಹಾಗೂ ಪಾವಿತ್ರ್ಯ ಹೊಂದಿಸುವುದರೊಂದಿಗೆ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದನ್ನು ಶ್ರೀಗಳು ಮೆಚ್ಚಿಕೊಂಡರು. ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಸೀತಾರಾಮ ಹೆಗಡೆ, ದತ್ತಾತ್ರೇಯ ಹೆಗಡೆ, ನರಸಿಂಹ ದೀಕ್ಷಿತ, ಗೋಪಾಲಕೃಷ್ಣ ಹೆಗಡೆ, ಶ್ರೀಪಾದ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.