ಸುದ್ದಿ ಕನ್ನಡ ವಾರ್ತೆ
ಗೋಕರ್ಣ: ಸರಿಯಾದ ರೀತಿಯಲ್ಲಿ ಉಪವಾಸ ಆಚರಿಸಿದಾಗ ನಿಶ್ಯಕ್ತಿ ಉಂಟಾಗುವುದಿಲ್ಲ, ಬದಲಾಗಿ ದೇಹ-ಮನಸ್ಸು ಹಗುರವಾಗುವುದರ ಜೊತೆಗೆ ಬಲವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಆ. 11ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಡಿ ‘ಉಪವಾಸ’ ಕುರಿತು ಪ್ರವಚನ ನೀಡಿದ ಅವರು, ಸರಿಯಾದ ಉಪವಾಸದಿಂದ ದೇಹದಲ್ಲಿನ ಬೇಡವಾದ ಅಂಶಗಳ ನಿರ್ಗಮನ, ಶುದ್ಧತೆ ಹಾಗೂ ಹಿತವಾದ ಹಸಿವು ಉಂಟಾಗುತ್ತದೆ ಎಂದರು.
ಧರ್ಮಶಾಸ್ತ್ರದಲ್ಲಿ ನಿತ್ಯೋಪವಾಸ, ವ್ರತೋಪವಾಸ ಹಾಗೂ ಕೃಚ್ಛ್ರ ಉಪವಾಸದ ಉಲ್ಲೇಖವಿದೆ. ಆಹಾರ ಕ್ರಮ ಸರಿಯಾಗಿದ್ದರೆ ಹಲವು ಸಮಸ್ಯೆಗಳಿಗೆ ಪರಿಹಾರ ಸಾಧ್ಯವಾಗಿದ್ದು, ಅಗತ್ಯಬಿದ್ದಾಗ ಉಪವಾಸವೂ ಸಹಕಾರಿಯಾಗುತ್ತದೆ. ಆದರೆ ತಪ್ಪಾಗಿ ಅಥವಾ ಅತಿಯಾಗಿ ಉಪವಾಸ ಮಾಡಿದರೆ ದೇಹದ ದುರ್ಬಲತೆ, ಬಾಯಾರಿಕೆ, ಹಸಿವಿನ ನಾಶ, ರುಚಿ ಕಡಿಮೆಯಾಗುವುದು ಹಾಗೂ ಮಾನಸಿಕ ಅಸಮತೋಲನದಂತಹ ಸಮಸ್ಯೆಗಳು ಉಂಟಾಗಬಹುದು ಎಂದು ಎಚ್ಚರಿಸಿದರು.
ವೈದ್ಯರ ಸಲಹೆಯಿಲ್ಲದೆ ಚಿಕಿತ್ಸೆಯ ಉದ್ದೇಶದಿಂದ ಉಪವಾಸ ಮಾಡಬಾರದು. ಗರ್ಭಿಣಿಯರು, ಮಕ್ಕಳು, ವೃದ್ಧರು, ದುರ್ಬಲರು ಹಾಗೂ ಕೆಲವು ಕಾಯಿಲೆಗಳಿಂದ ಬಳಲುತ್ತಿರುವವರು ಸ್ವಯಂಪ್ರೇರಿತವಾಗಿ ಉಪವಾಸ ಮಾಡಬಾರದು. ಆಹಾರ ಮತ್ತು ಉಪವಾಸ ಎರಡನ್ನೂ ಜ್ಞಾನಪೂರ್ವಕವಾಗಿ ಹಾಗೂ ಸೂಕ್ತ ಮಾರ್ಗದರ್ಶನದೊಂದಿಗೆ ಆಚರಿಸಿದಾಗ ಮಾತ್ರ ಆರೋಗ್ಯ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಸಹಕಾರಿಯಾಗುತ್ತದೆ ಎಂದರು. ಖ್ಯಾತ ಉದ್ಯಮಿ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ದಂಪತಿಗಳು ರಾಮಪೂಜೆ ಹಾಗೂ ಗೋಪೂಜೆಯಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು. ಸಿದ್ದಾಪುರ ಹವ್ಯಕ ಮಂಡಲದ ವಿವಿಧ ವಲಯಗಳ ಪರವಾಗಿ ಬಿ.ಎಸ್. ಮಂಜುನಾಥ ಶರ್ಮಾ ದಂಪತಿಗಳು ಗುರುಭಿಕ್ಷಾ ಸೇವೆ ನೆರವೇರಿಸಿದರು. ಕೆ.ಎನ್. ಮಂಜುನಾಥ ಭಟ್, ಶಾಂತಾರಾಮ ಹಿರೇಮನೆ, ಜಯಂತಿ ಹೆಗಡೆ, ರಾಘವೇಂದ್ರ ಹೆಗಡೆ ಮುಸವಳ್ಳಿ ಹಾಗೂ ರಾಧಾಕೃಷ್ಣ ಭಟ್ ದಂಪತಿಗಳು ಉಪಸ್ಥಿತರಿದ್ದರು.
