ಸುದ್ಧಿಕನ್ನಡ ವಾರ್ತೆ
ಪಣಜಿ: ಮಳೆಗಾಲದ ಆನಂದ ಸವಿಯಲು ಗೋವಾಕ್ಕೆ ಆಗಮಿಸಿ ಜಲಪಾತಗಳಿಗೆ ಭೇಟಿ ನೀಡುವ ಪ್ರವಾಸಿಗರು ಪರಿಸರವನ್ನು ಸಂರಕ್ಷಿಸುವ ಜೊತೆಗೆ ಜವಾಬ್ದಾರಿಯುತ, ಮತ್ತು ಸುರಕ್ಷಿತವಾಗಿದ್ದು ಪ್ರವಾಸೋದ್ಯಮ ಆನಂದಿಸಬೇಕು ಎಂದು ಗೋವಾ ಅರಣ್ಯ ಅಭಿವೃದ್ಧಿ ನಿಗಮ (GFDC) ಮನವಿ ಮಾಡಿದೆ.

ಗೋವಾದ ಜಲಪಾತಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಹಿತಕರ ಘಟನೆ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆ ಮತ್ತು ಜವಾಬ್ದಾರಿ ಪ್ರವಾಸೋದ್ಯಮ, ಪರಿಸರ ಸಂರಕ್ಷಣೆಯ ಕುರಿತು ಗೋವಾ ಅರಣ್ಯ ಅಭಿವೃದ್ಧಿ ನಿಗಮ ಜನಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದೆ.

ಗೋವಾದಲ್ಲಿ ಪ್ರವಾಸಿಗರು ಜಲಪಾತಗಳಿಗೆ ಭೇಟಿ ನೀಡುವಾಗ ಮಾರ್ಗದರ್ಶಕರು ಮತ್ತು ಅರಣ್ಯ ಇಲಾಖೆಯ ಸಿಬ್ಬಂಧಿಗಳ ಸೂಚನೆಯನ್ನು ಪಾಲಿಸಬೇಕು. ಅನುಮತಿಸಲಾದ ಮತ್ತು ಗೊತ್ತುಪಡಿಸಿದ ಸ್ಥಳಗಳಿಗೆ ಮಾತ್ರ ಭೇಟಿ ನೀಡಬೇಕು. ಜಲಪಾತ ಪ್ರದೇಶದಲ್ಲಿ ಸುತ್ತಮುತ್ತಲಿನ ಸ್ಥಳಗಳಲ್ಲಿ ಕಸ ಎಸೆಯಬಾರದು, ಲಭ್ಯವಿರುವ ಕಸದ ಬುಟ್ಟಿಯನ್ನು ಬಳಸಬೇಕು. ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಗೋವಾದಲ್ಲಿ ದೂಧಸಾಗರ, ಸಾವರಿ, ಮೈನಾಪಿ, ಪಾಳಿ, ನಾನೇಲಿ, ಚರಾವಣೆ, ಈ ಆರು ಜಲಪಾತಗಳನ್ನು ಹೊರತುಪಡಿಸಿ ಗೋವಾದಲ್ಲಿರುವ ಇತರ ಜಲಪಾತಗಳು ಜಿಎಫ್ ಡಿಸಿ ನಿರ್ವಹಣೆಯಲ್ಲಿಲ್ಲ ಎಂಬುದನ್ನು ಪ್ರವಾಸಿಗರು ಗಮನಿಸಬೇಕು. ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಜಲಪಾತಗಳಿಗೆ ಭೇಟಿ ನೀಡುವಾಗ ನೀರಿನ ಹರಿವು ಹಠಾತ್ ಹೆಚ್ಚಳವಾಗುವ ಸಾಧ್ಯತೆಯಿರುತ್ತದೆ. ನಿರ್ಬಂಧಿತ ಜಲಪಾತಗಳಿಗೆ ತೇರಳದಂತೆ ಸೂಚನೆಯಲ್ಲಿ ತಿಳಿಸಲಾಗಿದೆ.