ಸುದ್ದಿ ಕನ್ನಡ ವಾರ್ತೆ
ಕುಮಟಾ: ರಾಷ್ಟ್ರೀಯ ಹೆದ್ದಾರಿ 66 ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಬರ್ಗಿ ಸಮೀಪದ ಸರ್ಕಾರಿ ಪ್ರೌಢಶಾಲೆ ಬಳಿ ಸೋಮವಾರ ನಡೆದಿದೆ.
ಮೃತರನ್ನು ಕುಮಟಾ ಶಶಿಹಿತ್ಲ ನಿವಾಸಿ ದುರ್ಗಿ ಮಾದೇವ ಹರಿಕಾಂತ್ (62) ಎಂದು ಗುರುತಿಸಲಾಗಿದೆ. ದುರ್ಗಿ ಅವರು ಬರ್ಗಿಯಲ್ಲಿರುವ ಸಂಬಂಧಿಕರ ಮನೆಗೆ ತೆರಳಲು ಕುಮಟಾದಿಂದ ಬಂದು ಬರ್ಗಿಯಲ್ಲಿ ಬಸ್ ಇಳಿದಿದ್ದರು. ಬಳಿಕ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅವರು ಸರ್ಕಾರಿ ಪ್ರೌಢಶಾಲೆ ಸಮೀಪ ಹೆದ್ದಾರಿ ದಾಟಲು ಮುಂದಾಗಿದ್ದರು ಎನ್ನಲಾಗಿದೆ.
ಈ ವೇಳೆ ಕುಮಟಾ ಕಡೆಯಿಂದ ಗೋಕರ್ಣದತ್ತ ತೆರಳುತ್ತಿದ್ದ ಕಾರು ಮಹಿಳೆಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ದುರ್ಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದವರು ಸಿದ್ದಾಪುರದಿಂದ ಗೋಕರ್ಣದತ್ತ ತೆರಳುತ್ತಿದ್ದರು ಎನ್ನಲಾಗಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
