ಸುದ್ದಿ ಕನ್ನಡ ವಾರ್ತೆ
ಶಿರಸಿ: ಅಕ್ರಮವಾಗಿ ದೇಶಕ್ಕೆ ಪ್ರವೇಶಿಸುತ್ತಿರುವ ಕಡಿಮೆ ಬೆಲೆಯ ಅಡಿಕೆಯಿಂದ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ರಾಜ್ಯದ ಸಂಸದರು, ಕ್ಯಾಂಪ್ಕೋ ಹಾಗೂ ಅಡಿಕೆ ಮಹಾಮಂಡಳದ ಪ್ರತಿನಿಧಿಗಳ ನಿಯೋಗ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಮಾಡಿದೆ.

ನವದೆಹಲಿಯಲ್ಲಿ ಅಮಿತ್ ಶಾ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ನಿಯೋಗ ಭೇಟಿಯಾಗಿ ಅಡಿಕೆ ಬೆಳೆಗಾರರು ಹಾಗೂ ಸಹಕಾರ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿತು.

ಅಮಿತ್ ಶಾ ಅವರೊಂದಿಗೆ ನಡೆದ ಚರ್ಚೆಯಲ್ಲಿ ಕನಿಷ್ಠ ಆಮದು ಬೆಲೆ ನಿಯಮ ಉಲ್ಲಂಘಿಸಿ ಸುಂಕ ರಹಿತವಾಗಿ ದೇಶಕ್ಕೆ ಬರುತ್ತಿರುವ ಕಡಿಮೆ ಮೌಲ್ಯದ ಅಡಿಕೆ ಆಮದನ್ನು ತಕ್ಷಣ ತಡೆಯಬೇಕು ಎಂದು ಆಗ್ರಹಿಸಲಾಯಿತು. ಸಹಕಾರ ಸಂಸ್ಥೆಗಳ ಮೇಲಿರುವ ಹೆಚ್ಚುವರಿ ಸ್ಥಳೀಯ ತೆರಿಗೆ ಹೊರೆಯನ್ನು ತೆರವುಗೊಳಿಸಿ ಖಾಸಗಿ ವ್ಯಾಪಾರಿಗಳೊಂದಿಗೆ ಸಮಾನ ಪೈಪೋಟಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಯಿತು. ಇದಕ್ಕೆ ಶೀಘ್ರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಮಿತ್ ಶಾ ಭರವಸೆ ನೀಡಿದರು.
ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ನಿಯೋಗವು ಅಡಿಕೆ ತೋಟಗಳಲ್ಲಿ ಶಿಲೀಂಧ್ರನಾಶಕವಾಗಿ ಬಳಸುವ ಕಾಪರ್ ಸಲ್ಫೇಟ್‌ (ಮೈಲುತುತ್ತ) ಮೇಲಿನ ಜಿಎಸ್‌ಟಿ ದರವನ್ನು ಶೇ.18ರಿಂದ ಶೇ.5ಕ್ಕೆ ಇಳಿಸುವಂತೆ ಮನವಿ ಮಾಡಿತು. ಅಕ್ರಮ ಅಡಿಕೆ ಆಮದು ತಡೆಯಲು ವಿವಿಧ ಬಂದರುಗಳಲ್ಲಿ ತಪಾಸಣೆ ಹಾಗೂ ಜಾಗರೂಕತೆ ಬಲಪಡಿಸಲಾಗುತ್ತಿದೆ ಎಂದು ಸಚಿವೆ ತಿಳಿಸಿದರು.
ನಿಯೋಗದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ.ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಅರಗ ಜ್ಞಾನೇಂದ್ರ, ಅಡಿಕೆ ಮಹಾಮಂಡಳದ ಅಧ್ಯಕ್ಷರು, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್‌ಚಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಇದ್ದರು.