ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಶನಿವಾರ ಧಾರಾಕಾರ ಮಳೆಯಾಗುತ್ತಿದೆ. ಅದರಲ್ಲೂ ಬಹುಮುಖ್ಯವಾಗಿ ಯಲ್ಲಾಪುರದ ಅರಬೈಲ್ ಘಟ್ಟದ ಕೆಳಭಾಗವಾದ ಕೊಡ್ಲಗದ್ಧೆಯಲ್ಲಿ ಭಾರಿ ಮಳೆಯಾಗುತ್ತಿದೆ. ಶನಿವಾರ ಸುರಿಯುತ್ತಿರುವ ಭಾರಿ ಮಳೆಗೆ ಕೊಡ್ಲಗದ್ಧೆಯಲ್ಲಿ ಹಳ್ಳಕೊಳ್ಳಗಳು ಉಕ್ಕಿ ಹರಿದು ತೋಟದ ಮೇಲೂ ಹಾದುಹೋಗುತ್ತಿದೆ. ಭಾರಿ ಮಳೆಗೆ ಕೃಷಿಕರು ಕಂಗಾಲಾಗಿದ್ದಾರೆ.
ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಬಿಸಿಲು-ಮಳೆಯಾಗುತ್ತಿತ್ತು. ಆದರೆ ಶನಿವಾರ ದಿಢೀರ್ ಎಂದು ಭಾರಿ ಮಳೆ ಸುರಿಯತೊಡಗಿದ್ದು ಹಳ್ಳಕೊಳ್ಳಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದು ತೋಟದ ಮೇಲೆ ಹಳ್ಳ ಹಾದುಹೋಗುತ್ತಿದ್ದು ಕೃಷಿಕರು ಕಂಗಾಲಾಗಿದ್ದಾರೆ.

ಕೊಡ್ಲಗದ್ಧೆ ಭಾಗವು ಘಟ್ಟ ಪ್ರದೇಶದ ಬುಡದಲ್ಲಿರುವುದರಿಂದ ಕೃಷಿಕರಲ್ಲಿ ಇನ್ನಷ್ಟು ಆತಂಕ ಮನೆಮಾಡಿದೆ. ಇದೇ ರೀತಿ ಮಳೆ ಮುಂದುವರೆದರೆ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಹಾನಿ ಸಂಭವಿಸುವ ಆತಂಕವಿದೆ. ಈ ಭಾಗದಲ್ಲಿ ಕೆಲ ಪುಟ್ಟ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು ಕೆಲ ಭಾಗದಲ್ಲಿ ರಸ್ತೆ ಸಂಪರ್ಕಕ್ಕೂ ಅಡ್ಡಿಯುಂಟಾಗಿದೆ.
